Monday, July 6, 2026
Google search engine

Homeರಾಜ್ಯಗೃಹ ಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಆಧಾರ್ ಪರಿಶೀಲನೆಯಿಂದ ಸೌಲಭ್ಯ ರದ್ದಾಗಲ್ಲ; ಬೆಸ್ಕಾಂ ಸ್ಪಷ್ಟನೆ

ಗೃಹ ಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಆಧಾರ್ ಪರಿಶೀಲನೆಯಿಂದ ಸೌಲಭ್ಯ ರದ್ದಾಗಲ್ಲ; ಬೆಸ್ಕಾಂ ಸ್ಪಷ್ಟನೆ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಬಾಡಿಗೆದಾರರಿಗೆ ಬೆಸ್ಕಾಂ (BESCOM) ಮಹತ್ವದ ಭರವಸೆಯನ್ನು ನೀಡಿದೆ. ಪ್ರಸ್ತುತ ನಡೆಯುತ್ತಿರುವ ಫಲಾನುಭವಿಗಳ ಆಧಾರ್ ವಿವರಗಳ ಪರಿಶೀಲನಾ ಅಭಿಯಾನದಿಂದ ಸೌಲಭ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬಾಡಿಗೆದಾರರ ಆತಂಕಕ್ಕೆ ಅಂತ್ಯ

ಜುಲೈ 1ರಿಂದ ಮನೆಗಳಲ್ಲಿ ವಾಸವಿರುವ ನೈಜ ಫಲಾನುಭವಿಗಳ ಆಧಾರ್ ವಿವರಗಳನ್ನು ನವೀಕರಿಸಲು ಬೆಸ್ಕಾಂ ವಿಶೇಷ ಅಭಿಯಾನವನ್ನು ಕೈಗೊಂಡಿದೆ. ಹಲವು ಮನೆಗಳಲ್ಲಿ ಹಳೆಯ ಬಾಡಿಗೆದಾರರ ಆಧಾರ್ ಲಿಂಕ್ ಆಗಿರುವ ಕಾರಣ, ಹೊಸದಾಗಿ ಪರಿಶೀಲನೆ ನಡೆಸಿದರೆ ತಮಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳಬಹುದು ಎಂಬ ಆತಂಕ ಬಾಡಿಗೆದಾರರಲ್ಲಿ ಮನೆ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬೆಸ್ಕಾಂ ಅಧಿಕಾರಿಗಳು, ಪರಿಶೀಲನೆಯು ಪ್ರಸ್ತುತ ಮನೆಯಲ್ಲಿ ವಾಸವಿರುವವರ ವಿವರಗಳನ್ನು ನವೀಕರಿಸಲು ಮಾತ್ರವೇ ಹೊರತು, ಯೋಜನೆಯನ್ನು ರದ್ದುಗೊಳಿಸಲು ಅಲ್ಲ ಎಂದು ಅಭಯ ನೀಡಿದ್ದಾರೆ.

ಮನೆ ಬಾಗಿಲಿಗೆ ಬರುವ ಬೆಸ್ಕಾಂ ಸಿಬ್ಬಂದಿ

ಫಲಾನುಭವಿಗಳು ಯಾವುದೇ ಕಚೇರಿಗೆ ಅಲೆದಾಡುವ ಅಥವಾ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ. ಬೆಸ್ಕಾಂನ ಮೀಟರ್ ರೀಡರ್‌ಗಳು ಹಾಗೂ ಕ್ಷೇತ್ರ ಸಿಬ್ಬಂದಿಯೇ ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಬಾಡಿಗೆ ಅಥವಾ ಲೀಸ್ (ಗೇಣಿ) ಒಪ್ಪಂದದ ವಿವರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.

ಗ್ರಾಹಕರಿಗೆ ಮನವಿ

ಸಮೀಕ್ಷಾ ತಂಡಗಳು ಮನೆಗೆ ಭೇಟಿ ನೀಡಿದಾಗ ಬಾಡಿಗೆದಾರರು ತಮ್ಮ ಬಾಡಿಗೆ ಒಪ್ಪಂದ ಪತ್ರ ಹಾಗೂ ಗುರುತಿನ ಚೀಟಿಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸುವಂತೆ ಬೆಸ್ಕಾಂ ಕೋರಿದೆ. ಅಲ್ಲದೆ, ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಸಹಕಾರ ನೀಡಬೇಕೆಂದು ವಿನಂತಿಸಲಾಗಿದೆ.

ಸಹಾಯವಾಣಿ ಸಂಪರ್ಕ

ಆಧಾರ್ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣಗಳಿಗಾಗಿ ಗ್ರಾಹಕರು ಬೆಸ್ಕಾಂನ ಮುಖ್ಯ ಸಹಾಯವಾಣಿ: 1912, ವಿಶೇಷ ಸಹಾಯವಾಣಿ ಸಂಖ್ಯೆಗಳು: 9480816111, 9480816112, 9480816113, 9480816114 ನ್ನು
ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಂಪರ್ಕಿಸಬಹುದು.

RELATED ARTICLES
- Advertisment -
Google search engine

Most Popular