ಬೆಂಗಳೂರು : ನಗರದ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷದ ಮಕ್ಕಳಿಗೆ ದೈಹಿಕ ಹಿಂಸೆ ಹಾಗೂ ಕಿರುಕುಳ ನೀಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಕ್ಕಳಿಗೆ ಹಿಂಸೆ ನೀಡುವ ವಿಡಿಯೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ಐವರು ಆಯಾಗಳ ವಿರುದ್ಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಚ್ಎಎಲ್ ಕ್ಯಾಂಪಸ್ನಲ್ಲಿರುವ ಕ್ಯಾಪ್ಜೆಮಿನಿ ಸಂಸ್ಥೆಯ ಆವರಣದ ಬ್ರೂಕ್ಫೀಲ್ಡ್ನ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಂಪನಿಯ ಉದ್ಯೋಗಿಗಳು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ನೋಡಿಕೊಳ್ಳಲು ಬಿಡುತ್ತಿದ್ದರು. ಆದರೆ, ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಆಯಾಗಳು ದೈಹಿಕ ಹಿಂಸೆ ನೀಡಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ಆಗಿರುವ ವಿಡಿಯೊಗಳಲ್ಲಿ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಹಾಕಿ ಬೆದರಿಸುವುದು, ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಮಕ್ಕಳ ಬಾಯಿಗೆ ಬಲವಂತವಾಗಿ ನೀರು ಹಾಯಿಸುವುದು ಹಾಗೂ ಬಾತ್ರೂಮ್ನಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದೆ. ಮಕ್ಕಳು ಭಯದಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ವಿಡಿಯೊಗಳು ವೈರಲ್ ಆದ ಬಳಿಕ ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಸಲ್ಲಿಕೆಯಾಗಿದ್ದು, ಅದರ ಆಧಾರದಲ್ಲಿ ಎಚ್ಎಎಲ್ ಪೊಲೀಸರು ಐವರು ಆಯಾಗಳ ವಿರುದ್ಧ ಬಿಎನ್ಎಸ್ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ವೈರಲ್ ವಿಡಿಯೊಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



