Monday, June 29, 2026
Google search engine

Homeಅಪರಾಧಹೃದಯಾಘಾತ ನಾಟಕ ಬಯಲು : ಮದ್ಯದ ಅಮಲಿನಲ್ಲಿ ಮಲಗಿದ್ದ ಪತಿಯನ್ನು ಹತ್ಯೆ ಮಾಡಿದ ಪತ್ನಿ

ಹೃದಯಾಘಾತ ನಾಟಕ ಬಯಲು : ಮದ್ಯದ ಅಮಲಿನಲ್ಲಿ ಮಲಗಿದ್ದ ಪತಿಯನ್ನು ಹತ್ಯೆ ಮಾಡಿದ ಪತ್ನಿ

ಮೈಸೂರು : ಪತ್ನಿಯಿಂದಲೇ ಪತಿ ಕೊಲೆಯಾದ ಘಟನೆ ಕುವೆಂಪುನಗರದಲ್ಲಿ ನಡೆದಿದೆ.ನಿತ್ಯಾನಂದ(50) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಪತ್ನಿ ಸುಶೀಲ ಅವರೇ ಗಂಡನನ್ನು ಹತ್ಯೆ ಮಾಡಿರುವುದೆಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

50 ವರ್ಷದ ನಿತ್ಯಾನಂದ ಅವರು ಖಾಸಗಿ ಮಹೀಂದ್ರಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸುಶೀಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಸಾಂಸಾರಿಕ ಕಲಹ, ಹಣಕಾಸು ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ್ಗೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿತ್ಯಾನಂದ ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದರು. ಶನಿವಾರ ರಾತ್ರಿ ಕೂಡ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ತೆರಳಿದ್ದರು. ಬಳಿಕ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಪತ್ನಿ ಸುಶೀಲ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಬಳಿಕ ಹೃದಯಾಘಾತದಿಂದ ಸಾವಾಗಿದೆ ಎಂದು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಪತ್ನಿ ಸುಶೀಲ ಯತ್ನಿಸಿದ್ದಾಳೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನಿತ್ಯಾನಂದ ಅವರ ಸ್ನೇಹಿತ ದರ್ಶನ್ ಹಲವು ಬಾರಿ ಕರೆ ಮಾಡಿದ್ದರು. ಕರೆಗಳಿಗೆ ಸಮರ್ಪಕ ಉತ್ತರ ಸಿಗದ ಕಾರಣ ಅವರು ಮನೆ ಬಳಿ ಬಂದು ಬಾಗಿಲು ತಟ್ಟಿದರೂ ಸುಶೀಲ ಬಾಗಿಲು ತೆರೆಯಲಿಲ್ಲ ಎಂದು ತಿಳಿದುಬಂದಿದೆ.

ಬಳಿಕ ಸುಶೀಲ ಅವರು ನಿತ್ಯಾನಂದ ಅವರ ಅಣ್ಣನಿಗೆ ಕರೆ ಮಾಡಿ, “ನಿಮ್ಮ ತಮ್ಮನಿಗೆ ಹೃದಯಾಘಾತವಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಗೆ ಆಗಮಿಸಿದ ನಿತ್ಯಾನಂದ ಅವರ ಅಣ್ಣ ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಇದರಿಂದ ಅನುಮಾನಗೊಂಡ ಅವರು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ಸುಶೀಲ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಕೊಲೆ ಮಾಡಿರುವ ವಿಚಾರವನ್ನು ಸುಶೀಲ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇನ್ನಷ್ಟು ಸತ್ಯಾಸತ್ಯತೆಗಳು ಬೆಳಗಿಗೆ ಬರಲಿವೆ.

RELATED ARTICLES
- Advertisment -
Google search engine

Most Popular