ನವದೆಹಲಿ : ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳ ವಾಪಸಾತಿ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮತ್ತು ಭಯೋತ್ಪಾದನೆಯ ವಿಷಯಗಳಲ್ಲಿ ಭಾರತ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿದೆ. ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಎಲ್ಲಾ ವಿದೇಶಿ ಪ್ರಜೆಗಳನ್ನು ಕಾನೂನು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಮರಳಿ ಕಳುಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಗುರುವಾರ ನಡೆದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ದೇಶಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಸರ್ಕಾರದ ಅಭಿಪ್ರಾಯವನ್ನು ಹಂಚಿಕೊಂಡರು.
ಅಕ್ರಮ ವಲಸಿಗರ ವಾಪಸಾತಿ ಮತ್ತು ಬಾಂಗ್ಲಾದೇಶದ ಪ್ರತಿಕ್ರಿಯೆ
ಬಂಗಾಳದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರ, ಅಕ್ರಮ ವಲಸಿಗರನ್ನು ಗಡಿಯಿಂದ ಆಚೆಗೆ ಕಳುಹಿಸುವ ವಿಷಯದ ಬಗ್ಗೆ ಬಾಂಗ್ಲಾದೇಶದ ಇಬ್ಬರು ಸಚಿವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಬಾಂಗ್ಲಾದೇಶದ ಗೃಹ ಸಚಿವ ಸಲಾವುದ್ದೀನ್ ಅಹ್ಮದ್ ಅವರು ‘ಪುಶ್‌ಬ್ಯಾಕ್’ (ಬಲವಂತದ ವಾಪಸಾತಿ) ಆತಂಕ ವ್ಯಕ್ತಪಡಿಸಿದರೆ, ವಿದೇಶಾಂಗ ಸಚಿವ ಖಲೀಲ್ ಪುರ್ ರೆಹಮಾನ್ ಅವರು, “ಒಂದು ವೇಳೆ ಜನರನ್ನು ಬಲವಂತವಾಗಿ ನಮ್ಮ ಕಡೆಗೆ ತಳ್ಳಿದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಜೈಸ್ವಾಲ್ ಭಾರತದ ನೀತಿಯನ್ನು ಸ್ಪಷ್ಟಪಡಿಸಿದರು. “ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕಳುಹಿಸುವುದೇ ಇಲ್ಲಿನ ಪ್ರಮುಖ ವಿಷಯ. ಇದಕ್ಕೆ ಬಾಂಗ್ಲಾದೇಶದ ಸಹಕಾರ ಅಗತ್ಯವಿದೆ. ಪೌರತ್ವ ಪರಿಶೀಲನೆಗೆ ಸಂಬಂಧಿಸಿದ 2,860ಕ್ಕೂ ಹೆಚ್ಚು ಪ್ರಕರಣಗಳು ಬಾಂಗ್ಲಾದೇಶದ ಬಳಿ ಬಾಕಿ ಉಳಿದಿವೆ, ಅವುಗಳಲ್ಲಿ ಕೆಲವು ಐದು ವರ್ಷಗಳಿಗಿಂತಲೂ ಹಳೆಯವು. ಅಕ್ರಮವಾಗಿ ನೆಲೆಸಿರುವವರು ಇಲ್ಲಿಂದ ಹೋಗಲೇಬೇಕು ಎಂಬುದು ನಮ್ಮ ನೀತಿಯಾಗಿದೆ.”
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮತ್ತು ಭಯೋತ್ಪಾದನೆ
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಐಡಬ್ಲ್ಯೂಟಿ (IWT) ಅನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸಬೇಕು,” ಎಂದರು.
ಭಯೋತ್ಪಾದನೆಯು ದೀರ್ಘಕಾಲದಿಂದ ಪಾಕಿಸ್ತಾನದ ಸರ್ಕಾರಿ ನೀತಿಯ ಭಾಗವಾಗಿದೆ ಮತ್ತು ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತಕ್ಕೆ ಸಂಪೂರ್ಣ ಹಕ್ಕಿದೆ ಎಂದು ಅವರು ಹೇಳಿದರು. (ಏಜೆನ್ಸಿಸ್)



