Tuesday, May 5, 2026
Google search engine

Homeಕ್ರೀಡೆಭಾರತದಿಂದ ಜಮೈಕಾಗೆ ಎಲೆಕ್ಟ್ರಾನಿಕ್ ಸ್ಕೋರ್‌ಬೋರ್ಡ್ ಉಡುಗೊರೆ: ಸಬೀನಾ ಪಾರ್ಕ್ ಇನ್ಮುಂದೆ ಮತ್ತಷ್ಟು ಹೈಟೆಕ್!

ಭಾರತದಿಂದ ಜಮೈಕಾಗೆ ಎಲೆಕ್ಟ್ರಾನಿಕ್ ಸ್ಕೋರ್‌ಬೋರ್ಡ್ ಉಡುಗೊರೆ: ಸಬೀನಾ ಪಾರ್ಕ್ ಇನ್ಮುಂದೆ ಮತ್ತಷ್ಟು ಹೈಟೆಕ್!

ನವದೆಹಲಿ : ಭಾರತ ಮತ್ತು ಜಮೈಕಾ ನಡುವಿನ ಬೆಳೆಯುತ್ತಿರುವ ಸ್ನೇಹಕ್ಕೆ ಸಾಕ್ಷಿಯಾಗಿ, ಜಮೈಕಾದ ಐತಿಹಾಸಿಕ ‘ಸಬೀನಾ ಪಾರ್ಕ್’ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜಮೈಕಾ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಸಮ್ಮುಖದಲ್ಲಿ, ಭಾರತದ ಪರವಾಗಿ ಉಡುಗೊರೆಯಾಗಿ ನೀಡಲಾದ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸ್ಕೋರ್‌ಬೋರ್ಡ್‌ ಅನ್ನು ಲೋಕಾರ್ಪಣೆ ಮಾಡಿದರು.

ಉಭಯ ದೇಶಗಳ ನಡುವಿನ ಬೆಸುಗೆ

ಸ್ಕೋರ್‌ಬೋರ್ಡ್ ಅನಾವರಣದ ವೇಳೆ ಮಾತನಾಡಿದ ಡಾ. ಜೈಶಂಕರ್ ಅವರು, ಕ್ರೀಡೆಯು ಎರಡು ದೇಶಗಳನ್ನು ಜೋಡಿಸುವ ಪ್ರಮುಖ ಕೊಂಡಿಯಾಗಿದೆ ಎಂದು ಬಣ್ಣಿಸಿದರು. “ಭಾರತ ಮತ್ತು ಜಮೈಕಾದ ಕಥೆಯು ರನ್‍ಗಳು, ಗೌರವ ಮತ್ತು ಗಾಢವಾದ ಸ್ನೇಹದಿಂದ ಬರೆಯಲ್ಪಟ್ಟಿದೆ. ಈ ಸ್ಕೋರ್‌ಬೋರ್ಡ್ ಮುಂದಿನ ಅನೇಕ ಅದ್ಭುತ ಇನ್ನಿಂಗ್ಸ್‌ಗಳಿಗೆ ಸಾಕ್ಷಿಯಾಗಲಿದೆ” ಎಂದು ಅವರು ಹೇಳಿದರು.

ಸಬೀನಾ ಪಾರ್ಕ್‌ನ ನೆನಪುಗಳು

ವಿದೇಶಾಂಗ ಸಚಿವರು ಈ ಸಂದರ್ಭದಲ್ಲಿ ಕೆಲವು ಐತಿಹಾಸಿಕ ಕ್ಷಣಗಳನ್ನು ಸ್ಮರಿಸಿದರು. ಇದೇ ಮೈದಾನದಲ್ಲಿ ರಾಹುಲ್ ದ್ರಾವಿಡ್ ಶತಕ ಸಿಡಿಸಿದ್ದರು. ವಿರಾಟ್ ಕೊಹ್ಲಿ 2011 ರಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಇದೇ ಮೈದಾನದಲ್ಲಿ ಆರಂಭಿಸಿದ್ದರು. ಜಮೈಕಾದ ದಿಗ್ಗಜರಾದ ಜಾರ್ಜ್ ಹೆಡ್ಲಿ, ಮೈಕೆಲ್ ಹೋಲ್ಡಿಂಗ್ ಮತ್ತು ಕ್ರಿಸ್ ಗೇಲ್ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಐಪಿಎಲ್ ಸಮಯದಲ್ಲಿ ಭಾರತೀಯ ಪ್ರೇಕ್ಷಕರು ಜಮೈಕಾದ ಆಟಗಾರರನ್ನು ತಮ್ಮವರಂತೆಯೇ ಪ್ರೋತ್ಸಾಹಿಸುತ್ತಾರೆ ಎಂದರು.

ಡಾ. ಜೈಶಂಕರ್ ಅವರು ಕೇವಲ ಸಂಭ್ರಮದ ಸಮಯದಲ್ಲಷ್ಟೇ ಅಲ್ಲದೆ, ಚಂಡಮಾರುತ ಮತ್ತು ಕೋವಿಡ್-19 ನಂತಹ ಸಂಕಷ್ಟದ ಸಮಯದಲ್ಲಿಯೂ ಭಾರತವು ಔಷಧ ಮತ್ತು ಲಸಿಕೆಗಳ ಮೂಲಕ ಜಮೈಕಾದ ಬೆನ್ನಿಗೆ ನಿಂತಿದ್ದನ್ನು ನೆನಪಿಸಿಕೊಂಡರು.

ಭಾರತದ ಬದಲಾವಣೆಗಳ ಕುರಿತು ಚರ್ಚೆ

ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಅವರೊಂದಿಗಿನ ಭೇಟಿಯ ವೇಳೆ, ಭಾರತದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಗಳ ಬಗ್ಗೆ ಜೈಶಂಕರ್ ಚರ್ಚಿಸಿದರು. ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿ,ಮಾನವ ಸಂಪನ್ಮೂಲ ಅಭಿವೃದ್ಧಿ, ತಂತ್ರಜ್ಞಾನ ಆಧಾರಿತ ಆಡಳಿತ.

ಭೌಗೋಳಿಕವಾಗಿ ದೂರವಿದ್ದರೂ, ಎರಡೂ ದೇಶಗಳು ತಮ್ಮ ಆಕಾಂಕ್ಷೆಗಳು ಮತ್ತು ಹೋರಾಟಗಳಲ್ಲಿ ಪರಸ್ಪರ ಹತ್ತಿರವಾಗಿವೆ ಎಂದು ಅವರು ಪ್ರತಿಪಾದಿಸಿದರು.

ಗಣ್ಯರ ಉಪಸ್ಥಿತಿ:

ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಮಾರ್ಕ್ ಗೋಲ್ಡಿಂಗ್, ಸಚಿವರಾದ ಒಲಿವಿಯಾ ಗ್ರೇಂಜ್, ಜಮೈಕಾ ವಿದೇಶಾಂಗ ಸಚಿವೆ ಕಾಮಿನಾ ಜಾನ್ಸನ್ ಸ್ಮಿತ್, ಜಮೈಕಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಡಾ. ಡೊನೊವನ್ ಬೆನೆಟ್ ಸೇರಿದಂತೆ ಹಲವು ಗಣ್ಯರು ಮತ್ತು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿದ್ದರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular