ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರೈತರ ಪರ ಸಂಘಟನೆಗಳೊಂದಿಗೆ ನಾಳೆ ಜೆಡಿಎಸ್ ಪಾದಯಾತ್ರೆ ನಡೆಸಲಿದೆ. ಬಿಡದಿ ಬಳಿಯ ಅಂಚಿಪುರ ಗ್ರಾಮದಿಂದ ಹೊಸೂರು ಗ್ರಾಮದವರೆಗೆ ನಾಳೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಹಂಚಿಪುರದಿಂದ ಆರಂಭವಾಗುವ ಪಾದಯಾತ್ರೆಯು ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರುವರೆಗೂ ಪಾದಯಾತ್ರೆ ನಡೆಯಲಿದೆ.
ಹೊಸೂರು ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ. ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು. ಈಗಾಗಲೇ ಭೂಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಕಳೆದ 450 ದಿನಗಳಿಗೂ ಹೆಚ್ಚು ಅವಧಿಯಿಂದ ರೈತರು ಟೌನ್‌ಶಿಪ್ ವಿರೋಧಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಬಿಜೆಪಿ ಮತ್ತು ಜೆಡಿಎಸ್ ಅಲ್ಲದೆ ರೈತಪರ ಸಂಘಟನೆಗಳು ಬೆಂಬಲ ನೀಡಿವೆ.
ಈ ಯೋಜನೆಯಡಿ ಹಲವು ಗ್ರಾಮಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಕೆಲವು ಪ್ರದೇಶಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಕ್ರಮದಿಂದ ರೈತರ ಬದುಕು ಮತ್ತು ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗಲಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮತ್ತು ಕೆಲ ರೈತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ 33,562 ಕೋಟಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಾಳೆ ಈ ಯೋಜನೆಯನ್ನು ವಿರೋಧಿಸಿ ಪಾದಯಾತ್ರೆ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಇದು ಬರೀ ಪಾದಯಾತ್ರೆ ಅಲ್ಲ, ಸ್ವಾಭಿಮಾನದ ಹೋರಾಟ. ನಮ್ಮಭೂಮಿ ನಮಗೆ ಕೇವಲ ಮಣ್ಣಲ್ಲ, ಅದು ನಮ್ಮತಾಯಿ. ರೈತರ ಬೆವರು, ಕಾರ್ಮಿಕರ ರಕ್ತ ಈ ಮಣ್ಣಿನಲ್ಲಿದೆ. ಜೀವ ಬಿಡುತ್ತೇವೆ, ಭೂಮಿ ಬಿಡಲ್ಲ. ಇದು ನಮ್ಮ ಪ್ರತಿಜ್ಞೆ ಎಂದು ರೈತರು ಹೇಳುತ್ತಿದ್ದಾರೆ. ಹೀಗಾಗಿ ರೈತರ ಪರ ಹೋರಾಟ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು, ರೈತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನಮ್ಮ ನೆಲದ ಮೇಲೆ ನಮ್ಮ ಅಧಿಕಾರ, ಇದು ನಮ್ಮ ಜನಸಿದ್ಧ ಹಕ್ಕು. ಭೂಮಿ ಕಬಳಿಕೆ ಬೇಡ, ರೈತರಿಗೆ ನ್ಯಾಯಬೇಕು. ಹೀಗಾಗಿ ನಾಳೆ ರೈತರು ಇಡುವ ಪ್ರತಿಯೊಂದು ಹೆಜ್ಜೆಯೂ ಅನ್ಯಾಯದ ವಿರುದ್ಧದ ಶಕ್ತಿ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.



