ಗಂಗಾವತಿ : ಜ್ಞಾನ, ಶಿಸ್ತು ಮತ್ತು ಸಂಸ್ಕಾರದೊಂದಿಗೆ ಬದುಕನ್ನು ರೂಪಿಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ರವಿ ಡಿ.ಚನ್ನಣ್ಣನವರ್ ಹೇಳಿದರು.
ನಗರದ ಐಎಂಎ ಭವನದಲ್ಲಿ ಜ್ಞಾನಸಿರಿ ಪ್ರಥಮ ದರ್ಜೆ ಕಲಾ ಮತ್ತು ಮಹಿಳಾ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ದೊಡ್ಡ ಗುರಿಗಳನ್ನು ಹೊಂದಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸಮಯದ ಮಹತ್ವವನ್ನು ಅರಿತು ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮವನ್ನು ಜೀವನದ ಅವಿಭಾಜ್ಯ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಜ್ಞಾನ ವೃದ್ಧಿಗೆ ಬಳಸಬೇಕು. ದುರ್ಬಳಕೆಯಿಂದ ದೂರವಿದ್ದು ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರಲ್ಲದೆ, ಮಹಿಳೆಯರು ಶಿಕ್ಷಣದ ಮೂಲಕ ಸಮಾಜದಲ್ಲಿ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆತ್ಮಸ್ಥೈರ್ಯ, ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಅಗತ್ಯ ಎಂದು ಹೇಳಿದರು.
ಇನ್ನೂ ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಗೌರವಿಸಿ ಉತ್ತಮ ನಾಗರಿಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ವಿದ್ಯಾವಂತ, ಸಂಸ್ಕಾರವಂತ ಹಾಗೂ ಜವಾಬ್ದಾರಿಯುತ ಯುವ ಸಮುದಾಯ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ತಮ್ಮ ಬಾಲ್ಯದ ಬಡತನದ ದಿನಗಳನ್ನು ನೆನೆದು, ಶಿಕ್ಷಣವೇ ತಮ್ಮ ಬದುಕಿಗೆ ಹೊಸ ದಿಕ್ಕು ನೀಡಿದೆ ಎಂದು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಂಡರು.
ಬಳಿಕ ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ಮಾತನಾಡಿ, ನಿವೃತ್ತ ನ್ಯಾಯಾಧೀಶ ಎನ್.ಎಸ್.ಪಾಟೀಲ್ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಸಂಸ್ಥೆಯ ಅಭಿವೃದ್ಧಿಗೆ ತಮ್ಮ ಸಹಕಾರ ಮುಂದುವರಿಯಲಿದೆ ಎಂದರು.
ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಎನ್.ಎಸ್.ಪಾಟೀಲ್ ಅವರು ಸಾರ್ವಜನಿಕ ಜೀವನದಲ್ಲಿಯೂ ಸೇವೆ ಸಲ್ಲಿಸಿದ್ದು, ಇದೀಗ ಶಿಕ್ಷಣ ಕ್ಷೇತ್ರದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಮಾದರಿಯಾಗಿದೆ ಎಂದು ಪ್ರಶಂಸಿಸಿದರು.



