ರಾಯ್ಪುರ : ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 57ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಮೋಘ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ, ಅಂಗ್ ಕ್ರಿಶ್ ರಘುವಂಶಿ (71) ಮತ್ತು ರಿಂಕು ಸಿಂಗ್ (49) ಅವರ ಸ್ಫೋಟಕ ಆಟದಿಂದ 20 ಓವರ್‌ಗಳಲ್ಲಿ 192 ರನ್ ಕಲೆಹಾಕಿತು.
ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ರಸಿಕ್ ಸಲಾಮ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ RCB ಪರ ‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ ಕೇವಲ 60 ಎಸೆತಗಳಲ್ಲಿ ಅಜೇಯ 105 ರನ್ (11 ಬೌಂಡರಿ, 3 ಸಿಕ್ಸರ್) ಸಿಡಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ 9ನೇ ಶತಕವಾಗಿದೆ. ದೇವದತ್ ಪಡಿಕ್ಕಲ್ 39 ರನ್ ಗಳಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು.
ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ಬೆಂಗಳೂರು
ಈ ಗೆಲುವಿನೊಂದಿಗೆ RCB ಆಡಿದ 12 ಪಂದ್ಯಗಳಲ್ಲಿ 8 ಜಯದೊಂದಿಗೆ 16 ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಗುಜರಾತ್ ಟೈಟಾನ್ಸ್ ಕೂಡ 16 ಅಂಕಗಳನ್ನು ಹೊಂದಿದ್ದರೂ, ಉತ್ತಮ ರನ್ ರೇಟ್ (+1.053) ಆಧಾರದ ಮೇಲೆ ಬೆಂಗಳೂರು ಅಗ್ರಸ್ಥಾನಕ್ಕೇರಿದೆ.
ಮತ್ತೊಂದೆಡೆ, ಸೋಲನುಭವಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ
ಅಮೋಘ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಗೌರವ ಒಲಿಯಿತು.



