ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕರ್ನಾಟಕದಲ್ಲಿ ಇಂದು ಜನಸಾಮಾನ್ಯರು ಅಪರಾಧಿಗಳಿಗಿಂತ ಹೆಚ್ಚು ಕಾನೂನು ಕಾಪಾಡಬೇಕಾದ ವ್ಯವಸ್ಥೆಗೆ ಭಯಪಡಬೇಕಾದ ಸ್ಥಿತಿ ಎದುರಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಆರ್.ಅಶೋಕ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ; ರಕ್ಷಕರೇ ಭಕ್ಷಕರಾದರೇ ಸಿದ್ದರಾಮಯ್ಯನವರೇ? ಕರ್ನಾಟಕದಲ್ಲಿ ಇಂದು ಜನಸಾಮಾನ್ಯರು ಅಪರಾಧಿಗಳಿಗಿಂತ ಹೆಚ್ಚು ಭಯಪಡುವುದು ಯಾರಿಗೆ ಗೊತ್ತೇ? ಕಾನೂನು ಕಾಪಾಡಬೇಕಾದ ವ್ಯವಸ್ಥೆಯನ್ನೇ!
ಪೊಲೀಸ್ ಇಲಾಖೆ ಕುರಿತಂತೆ ಮಾಧ್ಯಮಗಳಲ್ಲಿ ಇಂದು ವರದಿಯಾಗಿರುವ ಅಂಕಿ-ಅಂಶಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಬೆಚ್ಚಿಬೀಳಿಸುವ ಸತ್ಯವನ್ನು ಬಯಲಿಗೆಳೆಯುತ್ತಿದೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸ್ ಇಲಾಖೆ ಶಿಸ್ತು, ನೈತಿಕತೆ ಮತ್ತು ಜನವಿಶ್ವಾಸ ಕಳೆದುಕೊಂಡು ಭ್ರಷ್ಟಾಚಾರದ ಕೆಸರಿನಲ್ಲಿ ಮುಳುಗಿದೆಯೇ ಎಂಬ ಗಂಭೀರ ಪ್ರಶ್ನೆ ಇಂದು ರಾಜ್ಯದ ಜನರ ಮುಂದಿದೆ ಎಂದು ಸರ್ಕಾರಕ್ಕೆ ಕುಟುಕಿದ್ದಾರೆ.
713 ಪೊಲೀಸ್ ಅಧಿಕಾರಿಗಳ ಅಮಾನತು: ಕೇವಲ ಎರಡು ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಅಮಾನತುಗಳು ಎಂದರೆ ಇದು ಯಾರೋ ಕೆಲವರ ವೈಯಕ್ತಿಕ ತಪ್ಪಲ್ಲ, ಸಂಪೂರ್ಣ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂಬುದಕ್ಕೆ ಸಾಕ್ಷಿ.
95 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು: ಜನರನ್ನು ರಕ್ಷಿಸಬೇಕಾದವರೇ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಸಾಮಾನ್ಯ ನಾಗರಿಕರು ಯಾರನ್ನು ನಂಬಬೇಕು? ಸುರಕ್ಷತೆಯ ಸಂಕೇತವಾಗಿರಬೇಕಾದ ಖಾಕಿ, ಇಂದು ಭಯ ಮತ್ತು ಅನುಮಾನಗಳ ಪ್ರತೀಕವಾಗುತ್ತಿರುವುದೇಕೆ? ಎಂದು ಕಿಡಿಕಾರಿದ್ದಾರೆ.
ದರೋಡೆ, ಕಳ್ಳತನ, ಕೊಲೆ ಆರೋಪಗಳಲ್ಲೂ ಪೊಲೀಸರ ಹೆಸರು: ಇದು ಕೇಳುವುದಕ್ಕೂ ನಾಚಿಕೆಯಾಗುತ್ತದೆ. ಕಾನೂನು ಜಾರಿ ಮಾಡಬೇಕಾದವರೇ ಕಾನೂನನ್ನ ಗಾಳಿಗೆ ತೂರಿ ಉಲ್ಲಂಘಿಸಲು ಆರಂಭಿಸಿದರೆ ರಾಜ್ಯದಲ್ಲಿ ನ್ಯಾಯ ಹೇಗೆ ಉಳಿಯುತ್ತದೆ?
ಬೆಂಗಳೂರೇ ಭ್ರಷ್ಟಾಚಾರದ ಕೇಂದ್ರವಾಗಿದೆಯೇ? ಅಮಾನತುಗೊಂಡವರಲ್ಲಿ ಬಹುಪಾಲು ಅಧಿಕಾರಿಗಳು ಬೆಂಗಳೂರಿನವರೇ ಎಂಬ ಸಂಗತಿ ಆತಂಕಕಾರಿ. ದೇಶದ ತಂತ್ರಜ್ಞಾನ ರಾಜಧಾನಿ ಎಂದು ಹೆಮ್ಮೆ ಪಡುವ ನಗರದಲ್ಲಿ ಕಾನೂನು ಸುವ್ಯವಸ್ಥೆ ಈ ಮಟ್ಟಿಗೆ ಹದಗೆಟ್ಟರೆ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ, ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲವೇ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
400ಕ್ಕೂ ಹೆಚ್ಚು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತು: ಇದು ಕೇವಲ ಆರೋಪಗಳ ಹಂತದಲ್ಲಿಲ್ಲ.ವಿಭಾಗೀಯ ತನಿಖೆಗಳಲ್ಲೇ ತಪ್ಪಿತಸ್ಥರೆಂದು ಸಾಬೀತಾದರೂ, ಈ ಸರ್ಕಾರ ಯಾವ ಕಠಿಣ ಕ್ರಮ ತೆಗೆದುಕೊಂಡಿದೆ? ಇಂದು ಜನರಲ್ಲಿ ಮೂಡಿರುವ ಭಯ ಏನೆಂದರೆ, ರೌಡಿ ಶೀಟರ್ ಗಳ ಜೊತೆ ಕೈಜೋಡಿಸುವವರು, ನಕಲಿ ದಾಖಲೆಗಳ ಜಾಲ ನಡೆಸುವವರು, ಅಮಾಯಕರ ಮೇಲೆ ದೌರ್ಜನ್ಯ ಎಸಗುವವರು ಕಾನೂನಿನ ಭಯವಿಲ್ಲದೆ ಸಂಚರಿಸುತ್ತಿದ್ದಾರೆ ಎಂಬುದು. ಇದು ಕೇವಲ ಪೊಲೀಸ್ ಇಲಾಖೆಯ ವೈಫಲ್ಯವಲ್ಲ, ಇದು ಗೃಹ ಇಲಾಖೆಯ ಸಂಪೂರ್ಣ ದಿವಾಳಿತನ! ಎಂದು ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯನವರೇ, ಗ್ಯಾರೆಂಟಿ ಸರ್ಕಾರದಲ್ಲಿ ರಾಜ್ಯದ ಜನರಿಗೆ ಜೀವ, ಆಸ್ತಿ ಮತ್ತು ಮಾನದ ರಕ್ಷಣೆಗಾಗಿ ಗ್ಯಾರಂಟಿ ಯಾರು ನೀಡುತ್ತಾರೆ? ಈ ಸರ್ಕಾರ ಅಪರಾಧಿಗಳನ್ನು ನಿಯಂತ್ರಿಸುತ್ತಿದೆಯೇ? ಅಥವಾ ಅಪರಾಧಿಗಳಿಗೆ ರಾಜಕೀಯ ರಕ್ಷಣೆ ನೀಡುತ್ತಿದೆಯೇ?
ಖಾಕಿಯ ಮೇಲಿನ ಜನರ ನಂಬಿಕೆಯನ್ನು ನಾಶಮಾಡಿದ ಈ ವ್ಯವಸ್ಥೆಯನ್ನು ತಕ್ಷಣವೇ ಶುದ್ಧೀಕರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ಜನರ ಆಕ್ರೋಶವೇ ಈ ಸರ್ಕಾರವನ್ನು ಅಧಿಕಾರದ ಕುರ್ಚಿಯಿಂದ ಕೆಳಗಿಳಿಸುವ ದಿನ ದೂರವಿಲ್ಲ ಎಂಧು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.



