Wednesday, May 13, 2026
Google search engine

Homeಸ್ಥಳೀಯಲಾರಿ ಮಾಲೀಕರ ಸಮಸ್ಯೆಗೆ ಸ್ಪಂದಿಸಿದ ಸಂಸದ ಯದುವೀರ್ : ಲಾರಿಗಳಿಗೆ ಅನುಕೂಲ : ಟರ್ಮಿನಲ್...

ಲಾರಿ ಮಾಲೀಕರ ಸಮಸ್ಯೆಗೆ ಸ್ಪಂದಿಸಿದ ಸಂಸದ ಯದುವೀರ್ : ಲಾರಿಗಳಿಗೆ ಅನುಕೂಲ : ಟರ್ಮಿನಲ್ ರಸ್ತೆ ಮತ್ತೆ ಆರಂಭ

ಮೈಸೂರು :  ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯಾದವಗಿರಿ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಲಾರಿಗೆಳಿಗೆ ಸಂಚಾರ ಮುಕ್ತ ಮಾಡಿಸುವಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಯಶಸ್ವಿಯಾಗಿದ್ದಾರೆ.

ಯಾದವಗಿರಿ ಬಳಿಯ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಬಂದ್‌ ಮಾಡಿದ್ದರಿಂದ ಲಾರಿಗಳು ಐದಾರು ಕಿಲೋ ಮೀಟರ್‌  ಬಳಸಿ ಬರಬೇಕಾಗಿತ್ತು. ಇದರಿಂದ ಲಾರಿ ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟವಾಗುತ್ತಿತ್ತು. ಈ ಕುರಿತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹತ್ತು ದಿನಗಳ ಹಿಂದೆ ಸಂಸದ ಯದುವೀರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂಸದ ಯದುವೀರ್‌ ಒಡೆಯರ್‌ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ರೈಲ್ವೆ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

ನಂತರ ಮಾತನಾಡಿದ ಸಂಸದ ಯದುವೀರ್‌ ಒಡೆಯರ್‌, ಈ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದ ಕೂಡಲೇ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅಧಿಕಾರಿಗಳು ಬೈಪಾಸ್‌ ಮಾದರಿಯಲ್ಲಿರುವ ಟರ್ಮಿನಲ್‌ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು ಎಂದರು.

ಈ ಟರ್ಮಿನಲ್‌ ದಾರಿ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಪ್ರತಿಯೊಂದು ಲಾರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಉಳಿತಾಯವಾಗಲಿದೆ. ಇದು ಲಾರಿಗಳ ಮಾಲೀಕರಿಗೆ, ಚಾಲಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

ಯಾದವಗಿರಿ ಗೂಡ್ಸ್‌ ಟರ್ಮಿನಲ್‌ ಅನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬ ವದಂತಿ ಹರಡಿದೆ. ಆದರೆ ಇದು ಕಪೋಲಕಲ್ಪಿತ. ಈ ರೀತಿಯ ಯಾವುದೇ ಪ್ರಸ್ತಾವನೆ ರೈಲ್ವೆ ಇಲಾಖೆ ಮುಂದಿಲ್ಲ ಎಂದರು.

ಈ ಗೂಡ್ಸ್‌ ಟರ್ಮಿನಲ್‌ ಸ್ಥಳಾಂತರವಾಗುವುದಿಲ್ಲ, ವಂದೇಭಾರತ್‌ ರೈಲ್ವೆ ನಿರ್ವಹಣೆಗೂ ಇದು ಬಳಕೆಯಾಗಲಿದೆ. ಇಂಥ ವದಂತಿಗಳನ್ನು ಯಾರೂ ಹಬ್ಬಿಸಬಾರದು. ಗೂಡ್ಸ್‌ ಟರ್ಮಿನಲ್‌ ಇಲ್ಲೇ ಇರಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಾಹೀದ್‌, ಯಾದವಗಿರಿ ನಿವಾಸಿಗಳ ಸಂಘದ ಅಧ್ಯಕ್ಷ ಎಸ್ ಕೆ ದಿನೇಶ್, ಸಾಮಾಜಿಕ ಉದ್ಯಮಿ ನಿಖಿಲೇಶ್, ಜಿಲ್ಲಾ ಸಂಘದ ಅಧ್ಯಕ್ಷ ಕೋದಂಡರಾಮ್ ಮತ್ತು ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಶಾಹೀದ್‌, ಹಲವಾರು ವರ್ಷಗಳಿಂದ ಈ ಕುರಿತು ಸಮಸ್ಯೆ ಎದುರಿಸುತ್ತಿದ್ದೇವು. ಈ ಬಗ್ಗೆ ಹಿಂದಿನ ಸಂಸದರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಸಂಸದರಿಗೆ ಹತ್ತು ದಿನಗಳ ಹಿಂದಷ್ಟೇ ಹೋಗಿ ಮನವಿ ಸಲ್ಲಿಸಿದೆವು. ಕೂಡಲೇ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಟರ್ಮಿನಲ್‌ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಇವರ ಋಣವನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ನಮ್ಮ ಮಹಾರಾಜರು ಎಂದರೆ ಜನಾನುರಾಗಿಗಳು. ಈಗ ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಇಂಥವರು ನಮ್ಮ ಜನಪ್ರತಿಧಿಗಳಾಗಿರಬೇಕು. ಇವರಿಗೆ ನಮ್ಮ ಸಂಪೂರ್ಣ ಬೆಂಬಲ ಎಂದು ಶಾಹೀದ್‌ ಘೋಷಿಸಿದಾಗ ಸಭೆಯಲ್ಲಿದ್ದವರು ಕೂಡ ದನಿ ಗೂಡಿಸಿದರು.

ಪ್ರತಿ ದಿನ 600ಕ್ಕೂ ಹೆಚ್ಚು ಲಾರಿಗಳು ಈ ಟರ್ಮಿನಲ್‌ ರಸ್ತೆಯಲ್ಲಿ ಈಗ ಸಂಚರಿಸುತ್ತದೆ. ಐದಾರು ಕಿಲೋ ಮೀಟರ್‌ ಕಡಿಮೆಯಾಗುತ್ತದೆ. ಇದರಿಂದ ಸಾವಿರಾರು ರೂಪಾಯಿ ಹಣ ಉಳಿತಾಯವಾಗುತ್ತದೆ. ಸಂಸದರ ನೆರವನ್ನು ನಾವು ಸದಾ ಸ್ಮರಿಸುತ್ತೇವೆ ಎಂದು ಶಾಹೀದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular