ಬೆಂಗಳೂರು : ಸೇವಾ ಭಾವದಿಂದ ಕೆಲಸ ಮಾಡಿದರೆ ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಗರದ ಆರ್ಟ್ ಆಫ್ ಲೀವಿಂಗ್ ಆವರಣದಲ್ಲಿ ನಡೆದ ‘ಧ್ಯಾನ ಮಂದಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ ಎಂದು ಕರೆ ನೀಡಿದರು.
ಯುವಜನತೆ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ‘ವಿಕಸಿತ ಭಾರತ’ ಗುರಿ ಸಾಧನೆಗೆ ಕೈಜೋಡಿಸಬೇಕು ಎಂದು ಪ್ರಧಾನಿ ಹೇಳಿದರು. ಬೆಂಗಳೂರು ಕೇವಲ ಸಾಫ್ಟ್‌ವೇರ್ ಮತ್ತು ಸೇವಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಜಗತ್ತಿಗೆ ಪರಿಚಯಿಸಿದ ನಗರ ಎಂದೂ ಪ್ರಶಂಸಿಸಿದರು.
ಭಾರತದ ಅಭಿವೃದ್ಧಿಗೆ ಯುವಜನತೆ ದೊಡ್ಡ ಶಕ್ತಿಯಾಗಿದ್ದು, ಇಂದಿನ ಕಾಲದಲ್ಲಿ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದರು.
ಆರ್ಟ್ ಆಫ್ ಲೀವಿಂಗ್ ಮಾದರಿಯ ಸಂಸ್ಥೆಗಳು ಯುವಜನರಲ್ಲಿ ಮಾನಸಿಕ ಶಾಂತಿ, ಏಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಈ ವೇಳೆ ಪ್ರಧಾನಿ ಶಿಕ್ಷಣ, ಯುವಜನ ಮತ್ತು ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಅರಣ್ಯ ವೃದ್ಧಿ, ಆದಿವಾಸಿ ಕಲ್ಯಾಣ, ಆರೋಗ್ಯ ಸೇವೆ, ಜೈಲು ಸುಧಾರಣೆ ಹಾಗೂ ಡಿಜಿಟಲ್ ಸಾಕ್ಷರತೆ ಸೇರಿದಂತೆ ಒಂಬತ್ತು ರಾಷ್ಟ್ರವ್ಯಾಪಿ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಹಾಗೂ ಸಂವೇದನಾಶೀಲ ಯುವಜನರ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ಇಂದಿನ ಕಾಲದಲ್ಲಿ ಧ್ಯಾನ, ಮಾನಸಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆ ಅತ್ಯಂತ ಮುಖ್ಯವೆಂದರು.
ಇನ್ನೂ ರಾಜಕೀಯ ಮತ್ತು ಸರ್ಕಾರಕ್ಕಿಂತ ಸಮಾಜವೇ ದೊಡ್ಡ ಶಕ್ತಿ. ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೇ ಮಿಷನ್ ಯಶಸ್ವಿಯಾಗುವುದಿಲ್ಲ ಎಂದರಲ್ಲದೆ, ತಂತ್ರಜ್ಞಾನ ಜನರನ್ನು ತಕ್ಷಣ ಸಂಪರ್ಕಿಸುತ್ತಿದ್ದರೂ, ಮನುಷ್ಯನು ತನ್ನೊಳಗಿನ ಆತ್ಮಸಂಪರ್ಕ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದರು.
ಇದೇ ವೇಳೆ ಪರಿಸರ ಸಂರಕ್ಷಣೆ ಕುರಿತಂತೆ ಮಾತನಾಡಿದ ಮೋದಿ, ಸಾವಯವ ಉತ್ಪನ್ನಗಳ ಬಳಕೆ, ಮಣ್ಣಿನ ನೈಸರ್ಗಿಕ ಗುಣಗಳ ರಕ್ಷಣೆ, ಅರಣ್ಯ ವೃದ್ಧಿ, ನೀರು-ವಿದ್ಯುತ್ ಉಳಿತಾಯ, ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಂತೆ ಕರೆ ನೀಡಿದರು. ಕೇಂದ್ರ ಸರ್ಕಾರದ ‘ಮಿಷನ್ ಲೈಫ್’ ಯೋಜನೆ ಜವಾಬ್ದಾರಿಯುತ ಜೀವನಶೈಲಿಯ ಪ್ರತೀಕ ಎಂದು ತಿಳಿಸಿದರು.
ಇದೇ ವೇಳೆ ಶ್ರೀ ಶ್ರೀ ಪ್ರಧಾನಿ ಮೋದಿಯನ್ನು ಪ್ರಶಂಸಿಸಿ, ಭಾರತ ಇಂದು ವಿಶ್ವದ ಮುಂದೆ ಆತ್ಮವಿಶ್ವಾಸದಿಂದ ನಿಂತಿದೆ. ದೇಶದಲ್ಲಿ ಸ್ವಚ್ಛತೆ, ಭದ್ರತೆ ಮತ್ತು ಹೊಸ ವಿಶ್ವಾಸದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಘಾಟನೆಯಾದ ಧ್ಯಾನ ಮಂದಿರದ ಮೇಲ್ಚಾವಣಿ ಕಮಲಾಕಾರದ ವಿನ್ಯಾಸ ಹೊಂದಿತ್ತು. ಅದನ್ನು ಉಲ್ಲೇಖಿಸಿದ ಪ್ರಧಾನಿ, “ನಮ್ಮ ಜೊತೆ ಗುರುದೇವರ ಆಶೀರ್ವಾದವಿದೆ. ಕಮಲದ ಆಶ್ರಯದಲ್ಲಿ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ” ಎಂದು ಹೇಳಿದರು.



