ಪಶ್ಚಿಮ ಬಂಗಾಳ : ಭವಾನಿಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಹೊರಹೋಗಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸಭೆ ನಡೆಯುತ್ತಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಮಾವೇಶ ನಡೆಸುತ್ತಿದ್ದರು. ಈ ವೇಳೆ ಬಿಜೆಪಿಯ ಧ್ವನಿವರ್ಧಕಗಳ ಶಬ್ದವು ತಮ್ಮ ಸಭೆಗೆ ಅಡ್ಡಿಪಡಿಸುತ್ತಿದೆ ಎಂದು ಮಮತಾ ಗಂಭೀರವಾಗಿ ಆರೋಪಿಸಿದರು. ಅಧಿಕಾರಿಗಳು ತಮಗೆ ಈ ಸಭೆ ನಡೆಸಲು ಅಧಿಕೃತ ಅನುಮತಿ ನೀಡಿದ್ದರೂ, ಉದ್ದೇಶಪೂರ್ವಕವಾಗಿ ಗಲಾಟೆ ಮಾಡುವ ಮೂಲಕ ಬಿಜೆಪಿ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆಯಿಂದ ಕೋಪಗೊಂಡ ಮಮತಾ, ಇಂತಹ ಅಸಭ್ಯ ವರ್ತನೆಯ ನಡುವೆ ನಾನು ಸಭೆ ನಡೆಸಲಾರೆ ಎಂದು ಹೇಳಿ ಜನರ ಕ್ಷಮೆಯಾಚಿಸಿ ವೇದಿಕೆಯಿಂದ ಇಳಿದು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಮಿತ್ ಮಾಳವೀಯ ಅವರು ಪ್ರತಿಕ್ರಿಯಿಸಿ, ಸೋಲಿನ ಭೀತಿಯಿಂದಾಗಿ ಮಮತಾ ಬ್ಯಾನರ್ಜಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಈ ಜಿದ್ದಾಜಿದ್ದಿನಿಂದಾಗಿ ಭವಾನಿಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಟಿಎಂಸಿ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.



