ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆಯೇ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದದ ಬಹುತೇಕ ಅಂಶಗಳಿಗೆ ಅನುಮೋದನೆ ಸಿಕ್ಕಿದ್ದು, ಇದೇ ವಾರದಲ್ಲಿ ಒಪ್ಪಂದ ಅಂತಿಮಗೊಳ್ಳಬಹುದು ಎಂದು ಟ್ರಂಪ್ ಗುರುವಾರ ತಿಳಿಸಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕುವ ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಒಪ್ಪಂದ ಪೂರ್ಣಗೊಂಡ ತಕ್ಷಣ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಅಧಿಕೃತವಾಗಿ ಮುಕ್ತಗೊಳಿಸಲಾಗುವುದು, ಆದರೆ ಅಲ್ಲಿಯವರೆಗೆ ದಿಗ್ಬಂಧನ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಶಾಂತಿ ಒಪ್ಪಂದದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನಾವು ಇರಾನ್‌ನೊಂದಿಗೆ ಯುದ್ಧವನ್ನು ಕೊನೆಗೊಳಿಸುವ ಅದ್ಭುತ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಬಹುಶಃ ಯುರೋಪ್‌ನಲ್ಲಿ ಈ ವಾರಾಂತ್ಯದೊಳಗೆ ಒಪ್ಪಂದಕ್ಕೆ ಸಹಿ ಬೀಳಬಹುದು” ಎಂದಿದ್ದಾರೆ.
ಈ ವಿಷಯವಾಗಿ ತಾವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುಎಇ, ಕತಾರ್, ಸೌದಿ ಅರೇಬಿಯಾ, ಬಹ್ರೇನ್, ಕುವೈತ್ ಸೇರಿದಂತೆ ಹಲವು ದೇಶಗಳ ನಾಯಕರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರೊಂದಿಗೂ ಚರ್ಚಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರ ವಿವಾದಕ್ಕೆ ತೆರೆ?
“ಈ ಒಪ್ಪಂದದ ಮೂಲಕ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವ ವಿವಾದಕ್ಕೂ ಪರಿಹಾರ ಸಿಕ್ಕಿದೆ. ಇರಾನ್ ಇನ್ಮುಂದೆ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಎಂಬುದೇ ಈ ಒಪ್ಪಂದದ ಮುಖ್ಯ ಉದ್ದೇಶ ಮತ್ತು ನಮ್ಮ ಬಹುದೊಡ್ಡ ಸಾಧನೆ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಟ್ರಂಪ್ ಅವರ ಈ ದಾವೆಗೆ ಇರಾನ್ ಹೇಳಿದ್ದೇನು?
ಮತ್ತೊಂದೆಡೆ, ಶಾಂತಿ ಒಪ್ಪಂದ ಅಂತಿಮಗೊಂಡಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಇರಾನ್ ತಕ್ಷಣವೇ ಪ್ರತಿಕ್ರಿಯಿಸಿದೆ. ಒಪ್ಪಂದದ ಕುರಿತು ತಾವು ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಇರಾನ್‌ನ ಐಆರ್‌ಎನ್‌ಎ (IRNA) ಸುದ್ದಿ ಸಂಸ್ಥೆಯ ಪ್ರಕಾರ, “ಒಪ್ಪಂದದ ಕರಡು ಪ್ರತಿ (Draft) ಮತ್ತು ಅದರಲ್ಲಿರುವ ಅಂಶಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲದಕ್ಕೂ ಸಹಮತಿ ಸಿಕ್ಕ ನಂತರವಷ್ಟೇ ಇರಾನ್ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ” ಎಂದು ಇರಾನ್ ತಿಳಿಸಿದೆ. (ಏಜೆನ್ಸಿಸ್)



