ಬೆಂಗಳೂರು : ಬೆಂಗಳೂರಿನಲ್ಲಿ ರ‍್ಯಾಪಿಡೋ ಆಟೋ ಬುಕಿಂಗ್‌ನಲ್ಲಿ ಭಾರೀ ಲೋಪವೊಂದು ಬೆಳಕಿಗೆ ಬಂದಿದ್ದು, ಇದು ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಆ್ಯಪ್‌ನಲ್ಲಿ ತೋರಿಸುವ ಚಾಲಕ ಮತ್ತು ವಾಹನದ ವಿವರಗಳಿಗೂ, ನಿಜವಾಗಿ ಸ್ಥಳಕ್ಕೆ ಬರುವ ವಾಹನಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ತಮಗೆ ಎದುರಾದ ಇಂತಹದ್ದೇ ಒಂದು ಕಹಿ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರು ರ‍್ಯಾಪಿಡೋ ಮೂಲಕ ಆಟೋ ಬುಕ್ ಮಾಡಿದಾಗ ಆ್ಯಪ್‌ನಲ್ಲಿ ಚಾಲಕನ ಹೆಸರು ‘ಲಕ್ಷ್ಮೀಕಾಂತ್’ ಹಾಗೂ ವಾಹನ ಸಂಖ್ಯೆ KA03 AL 0071 ಎಂದು ತೋರಿಸಿತ್ತು. ಆದರೆ, ಸ್ಥಳಕ್ಕೆ ಬಂದ ಆಟೋದ ಸಂಖ್ಯೆ KA02 AJ 4492 ಆಗಿದ್ದು, ಚಾಲಕ ತನ್ನನ್ನು ‘ಮೊಹಮ್ಮದ್ ಹಬ್ಬಾಸ್’ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಆ್ಯಪ್‌ನಲ್ಲಿ ತೋರಿಸುವ ಚಾಲಕ ಮತ್ತು ವಾಹನದ ಮಾಹಿತಿಯನ್ನು ನಂಬಿಯೇ ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳು, ವಾಹನವನ್ನು ಹತ್ತುತ್ತಾರೆ. ಇಂತಹ ಸಂದರ್ಭಗಳಲ್ಲಿ ಬೇರೆ ಚಾಲಕ ಮತ್ತು ಬೇರೆ ವಾಹನ ಬಂದರೆ ಪ್ರಯಾಣಿಕರ ಸುರಕ್ಷತೆಗೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಈ ಘಟನೆ ಕುರಿತು ಪುನೀತ್ ಕೆರೆಹಳ್ಳಿ, ರ‍್ಯಾಪಿಡೋ ಸಂಸ್ಥೆ, ಕರ್ನಾಟಕ ಸಾರಿಗೆ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸರು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಆ್ಯಪ್ ಆಧಾರಿತ ಸಾರಿಗೆ ಸೇವೆಗಳ ವಿಶ್ವಾಸಾರ್ಹತೆಯ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ಈ ದೂರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರ‍್ಯಾಪಿಡೋ ಕೇರ್ಸ್, ಚಾಲಕರು ತಮ್ಮ ನೋಂದಾಯಿತ ವಾಹನ ಮತ್ತು ಖಾತೆಯನ್ನು ಮಾತ್ರ ಬಳಸಲು ನಿಯಮಾವಳಿಗಳಲ್ಲಿ ಅವಕಾಶವಿದೆ ಎಂದು ತಿಳಿಸಿದ್ದು, ಪ್ರಕರಣದ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದೆ.



