ನವದೆಹಲಿ: ನೇಪಾಳದ ಬಾಲೇನ್ ಶಾ ಸರ್ಕಾರವು ಭಾರತದಿಂದ ನೇಪಾಳಕ್ಕೆ ಹೋಗುವ ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ವಸ್ತುಗಳ ಮೇಲೆ ಸುಂಕ ವಿಧಿಸುತ್ತಿದೆ. ಈಗ 63 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಭಾರತದಿಂದ ನೇಪಾಳಕ್ಕೆ ಕೊಂಡೊಯ್ಯುವ ಪ್ರವಾಸಿಗರು ಮತ್ತು ಸಾಮಾನ್ಯ ಜನರಿಂದ ಶೇಕಡಾ 5 ರಿಂದ 18 ರಷ್ಟು ಸೀಮಾ ಸುಂಕ (Customs Duty) ವಸೂಲಿ ಮಾಡಲಾಗುತ್ತಿದೆ. ಈ ನಿರ್ಧಾರವು ಉಭಯ ದೇಶಗಳ ಗಡಿ ಭಾಗದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತೀಯ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಏನು ಎನ್ನುವುದನ್ನು ನೋಡುವುದಾದರೆ ಈ ಕುರಿತು ಎದ್ದಿರುವ ಆತಂಕಗಳ ಬಗ್ಗೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
ನಿರಂತರ ಸಂಪರ್ಕದಲ್ಲಿ ದೆಹಲಿ: ಗಡಿ ದಾಟುವ ಪ್ರಯಾಣಿಕರಿಂದ ಸುಂಕ ವಸೂಲಿ ಮಾಡುತ್ತಿರುವ ವರದಿಗಳನ್ನು ಭಾರತ ಸರ್ಕಾರ ಗಮನಿಸಿದೆ. ಈ ಬಗ್ಗೆ ನವದೆಹಲಿಯು ಕಠ್ಮಂಡು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಕಳ್ಳಸಾಗಣೆ ತಡೆಗೆ ಕ್ರಮ: ನೇಪಾಳ ಸರ್ಕಾರವು ಈ ಕ್ರಮವನ್ನು ಪ್ರಮುಖವಾಗಿ ಅನೌಪಚಾರಿಕ ವ್ಯಾಪಾರ ಮತ್ತು ಕಳ್ಳಸಾಗಣೆಯನ್ನು (Smuggling) ತಡೆಯುವ ಉದ್ದೇಶದಿಂದ ಕೈಗೊಂಡಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.
ಸಾಮಾನ್ಯ ಜನರಿಗೆ ತೊಂದರೆಯಿಲ್ಲ: ನೇಪಾಳದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದ ಜೈಸ್ವಾಲ್, "ವೈಯಕ್ತಿಕ ಅಥವಾ ಗೃಹ ಬಳಕೆಯ ವಸ್ತುಗಳನ್ನು ಕೊಂಡೊಯ್ಯುವ ಸಾಮಾನ್ಯ ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನೇಪಾಳ ಭರವಸೆ ನೀಡಿದೆ," ಎಂದು ಹೇಳಿದರು.
ಹೊಸ ನಿಯಮವೇನಲ್ಲ, ಈಗ ಜಾರಿ ಅಷ್ಟೇ!
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಬಗ್ಗೆ ಮಾತನಾಡಿದ ವಕ್ತಾರರು, “ಈ ಸುಂಕದ ಕಾನೂನು ನೇಪಾಳದಲ್ಲಿ ಹೊಸದೇನಲ್ಲ. ಇದು ಮೊದಲೇ ಅಸ್ತಿತ್ವದಲ್ಲಿತ್ತು, ಆದರೆ ಈಗ ನೇಪಾಳ ಸರ್ಕಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ ಅಷ್ಟೆ,” ಎಂದು ಸ್ಪಷ್ಟಪಡಿಸಿದರು.
ಭಾರತ ಸರ್ಕಾರವು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಡಿ ಭಾಗದ ಜನರಿಗೆ ತೊಂದರೆಯಾಗದಂತೆ ನೇಪಾಳದೊಂದಿಗೆ ಚರ್ಚೆ ನಡೆಸುತ್ತಿದೆ. (ಏಜೆನ್ಸಿಸ್)



