ಬೆಂಗಳೂರು : ದೊಡ್ಮನೆ ಕುಡಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇಂದು 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಶಿವಣ್ಣ ಅವರ ಹುಟ್ಟುಹಬ್ಬ ಅಭಿಮಾನಿಗಳಿಗೆ ಮತ್ತಷ್ಟು ಸಂತಸ ತಂದಿದೆ.
ಅಣ್ಣಾವ್ರು ಅಭಿಮಾನಿಗಳನ್ನು ದೇವರುಗಳು ಎಂದು ಗೌರವಿಸುತ್ತಿದ್ದ ಸಂಪ್ರದಾಯವನ್ನು ದೊಡ್ಮನೆ ಕುಡಿಗಳು ಮುಂದುವರಿಸಿಕೊಂಡು ಬರುತ್ತಿದ್ದು, ಎಷ್ಟೇ ಬ್ಯುಸಿ ಇದ್ದರೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಶಿವಣ್ಣ, ಈ ಬಾರಿಯೂ ತಮ್ಮ ನಿವಾಸದ ಬಳಿ ಅಭಿಮಾನಿಗಳೊಂದಿಗೆ ಸಂಭ್ರಮದಲ್ಲಿ ಭಾಗಿಯಾದರು.
ಶಿವಣ್ಣ ಅವರ ಮೇಲಿನ ಅಭಿಮಾನಿಗಳು ತೋರಿಸುವ ಪ್ರೀತಿ ವಿಶೇಷವಾಗಿದ್ದು, ಹಾರ, ಕೇಕ್, ಉಡುಗೊರೆ, ಶಾಲು-ಶಲ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತಾರೆ. ಆದರೆ ಈ ಬಾರಿ ಶಿವಣ್ಣ, ಅಭಿಮಾನಿಗಳು ಖರ್ಚು ಮಾಡುವ ಹಣವನ್ನು ವ್ಯರ್ಥ ಮಾಡದೆ ಶಕ್ತಿಧಾಮದ ಮಕ್ಕಳ ನೆರವಿಗೆ ಬಳಸುವಂತೆ ಮನವಿ ಮಾಡಿದ್ದಾರೆ. ಅದಕ್ಕಾಗಿ ದೇಣಿಗೆ ನೀಡಲು ಸ್ಕ್ಯಾನರ್ ಕೋಡ್ ವ್ಯವಸ್ಥೆಯನ್ನೂ ಮಾಡಿದ್ದಾರೆ. ಶಿವಣ್ಣ ಅವರ ಕರೆಗೆ ಅಭಿಮಾನಿಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಇನ್ನು ಶಿವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಿನಿಮಾ ತಂಡಗಳು ಹೊಸ ಸಿನಿಮಾಗಳ ಘೋಷಣೆ ಮಾಡುವ ಮೂಲಕ ಶುಭಾಶಯ ಕೋರಿವೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಹಾಗೂ ಚೇತನ್ ಕುಮಾರ್ ನಿರ್ದೇಶನದ ‘M16 ಜೆಜೆ ರಾಯ್’ ಸಿನಿಮಾ ಕೂಡ ಘೋಷಣೆಯಾಗಿದೆ. ಹಾಗೂ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಅಭಿನಯದ ‘666 ಆಪರೇಷನ್ ಡ್ರೀಮ್’ ಸೇರಿದಂತೆ ಹಲವು ಬಹುನಿರೀಕ್ಷಿತ ಸಿನಿಮಾಗಳು ಅಭಿಮಾನಿಗಳಿಗಾಗಿ ಸಿದ್ಧವಾಗುತ್ತಿವೆ. ‘ಗುಮಡಿ ನರಸಯ್ಯ’, ‘ಬೇಲ್’, ‘ಎ ಫಾರ್ ಆನಂದ್’ ಸೇರಿದಂತೆ ಹಲವು ಚಿತ್ರಗಳು ಮುಂದಿನ ದಿನಗಳಲ್ಲಿ ತೆರೆಗೆ ಬರಲಿವೆ.
ಅಭಿಮಾನಿಗಳ ಪ್ರೀತಿ ಮತ್ತು ಹಾರೈಕೆಗಳೊಂದಿಗೆ ಶಿವಣ್ಣ ಅವರ 64ನೇ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಿದೆ.



