Thursday, May 14, 2026
Google search engine

Homeರಾಜ್ಯಸುದ್ದಿಜಾಲಎಂಸಿಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಿರಿ, ರೈತರಿಗೆ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ದೊಡ್ಡಸ್ವಾಮೇಗೌಡ

ಎಂಸಿಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಿರಿ, ರೈತರಿಗೆ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ: ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಂಸಿಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹರಿಸುವ ಮೂಲಕ ಸರ್ಕಾರದಿಂದ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ದೊರೆಯುವ ಸವಲತ್ತುಗ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಸಾಲದ ಮೂಲಕ ಕೊಡಮಾಡಲಾದ ಟ್ರ್ಯಾಕ್ಟರ್ ಗಳು ಮತ್ತು ಮಿನಿ ಟ್ರ್ಯಾಕ್ಟರ್ ಗಳ ಕೀಗಳನ್ನು ಫಲಾನುಭವಿ ರೈತರಿಗೆ ವಿತರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಬ್ಯಾಂಕಿನಿಂದ ಹೊಸ ರೈತ ಸದಸ್ಯರುಗಳಿಗೆ ಸಾಲ ನೀಡುತ್ತಿರಲಿಲ್ಲಾ ಆದರೆ ನಮ್ಮ ಆಡಳಿತ ಮಂಡಳಿ ಆಧಿಕಾರಕ್ಕೆ ಬಂದ ನಂತರ ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯ ಸುಸ್ತಿಯಾಗದ 417 ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ರೈತ ಸದಸ್ಯರುಗಳಿಗೆ ಆಧ್ಯತೆಯ ಮೇರೆಗೆ ಸಾಲ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬ್ಯಾಂಕಿನ ವತಿಯಿಂದ ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ಸಾಲ ನೀಡುವಂತೆ ಬೇಡಿಕೆ ಬಂದಿದ್ದು ಈ ಕುರಿತು ನಬಾರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸಿ ಆನಂತರ ಆ ಬಗ್ಗೆ ಗಮನ ಹರಿಸಲಾಗುತ್ತದೆಂದು ಅಧ್ಯಕ್ಷರು ಮಾಹಿತಿ ನೀಡಿದರು‌.

ಚಿನ್ನದ ಮೇಲಿನ ಸಾಲದ ಬಡ್ಡಿ ದರವನ್ಬು ಕಡಿಮೆ ಮಾಡಬೇಕು ಎಂದು ರೈತರು ಆಗ್ರಹಿಸಿದಾಗ ಇದಕ್ಕೆ ಉತ್ತರಿಸಿದ ದೊಡ್ಡಸ್ವಾಮೇಗೌಡ ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯ ಮಂಡಿಸಿ ಬಡ್ಡಿ ದರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಸಗುತ್ತದೆಂದರಲ್ಲದೆ ಈವರೆಗೆ ನಮ್ಮ ಬ್ಯಾಂಕಿನ ವತಿಯಿಂದ 200 ಕೋಟಿ ರೂ ಚಿನ್ನದ ಅಡಮಾನ ಸಾಲ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಎಂಸಿಡಿಸಿಸಿ ಬ್ಯಾಂಕಿನಲ್ಲಿ ಒಂದು ಸಾವಿರ ಕೋಟಿ ನಿಶ್ಚಿತ ಠೇವಣಿ ಇದ್ದು ಅದರ ಪ್ರಮಾಣ ಹೆಚ್ಚಾದರೆ ರೈತರಿಗೆ ಅಗತ್ಯವಿರುವಷ್ಠು ಸಾಲ ನೀಡಲು ನಮಗೆ ಸಾಧ್ಯವಾಗಲಿದೆ ಎಂದ ಅವರು ಠೇವಣಿ ಇಡಲು ಜನರು ಮುಂದೆ ಬರಬೇಕೆಂದರು.

ಬೋರ್ ವೆಲ್ ಮತ್ತು ಟ್ರ್ಯಾಕ್ಟರ್ ಸಾಲ ಪಡೆಯಲು ಸರ್ಕಾರ ಹಾಗೂ ಭ್ಯಾಂಕ್ ನಿಗದಿಪಡಿಸಿರುವಷ್ಠು ಜಮೀನು ಇಲ್ಲದಿದ್ದರೆ ಅವರ ಸಂಬಂದಿಕರ ಜಮೀನಿನ ದಾಖಲೆ ಪಡೆದು ಸಾಲ ನೀಡಲು ಚಿಂತಿಸಿದ್ದು ಈ ಬಗ್ಗೆ ಶೀಘ್ರ ಆದೇಶ ಹೊರಡಿಲಾಗುತ್ತದೆಂದು ಪ್ರಕಟಿಸಿದರು.

ರೈತರ ಹಿತದೃಷ್ಠಿಯಿಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರುಗಳಿಗೆ ಎಂಸಿಡಿಸಿಸಿ ಬ್ಯಾಂಕ್ ಮೂಲಕ 5 ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆದು ಸಕಾಲದಲ್ಲಿ ಸಾಲ ಮರು ಪಾವತಿಸಿ ಅಭಿವೃದ್ದಿಗೆ ಸಹಕರಿಸಬೇಕೆಂದು ಕೋರಿದರು.

ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯ ಸ್ತ್ರೀ-ಶಕ್ತಿ ಸ್ವ ಸಹಾಯ ಸಂಘಗಳಿಗೂ 15 ರಿಂದ 20 ಲಕ್ಷ ಸಾಲ ವಿತರಣೆ ಮಾಡುತ್ತಿದ್ದು ಇದರಿಂದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.

ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ದಿನೇಶ್, ಸಂಘದ ಮಾಜಿ ಅಧ್ಯಕ್ಷರಾದ ತ್ರಯಂಬಕಸ್ವಾಮಿ, ಶಿವಾನಂದ್, ರಾಜಶೇಖರ್, ಉಪಾಧ್ಯಕ್ಷ ಕೆಂಪೇಗೌಡ, ನಿರ್ದೇಶಕರಾದ ಎಚ್.ಸಿ.ಮಹದೇವಪ್ಪ, ಎಂ.ಶಂಕರ್, ವೃಷಬೇಂದ್ರಪ್ಪ, ಕೃಷ್ಣ, ಎ.ಜಿ.ಹರೀಶ್, ಕೆ‌.ಟಿ.ರಾಮಕೃಷ್ಣ, ಎಸ್.ಕವಿತಾ, ಕಾತ್ಯಾಯಿನಿ, ಸಿಇಓ ಅನಂತ್, ಸಿಬ್ಬಂದಿಗಳಾದ ಕುಮಾರ್, ವೆಂಕಟೇಶ್, ಶಿವಪ್ರಸಾದ್, ಮಲ್ಲಿಕಾರ್ಜುನ್, ಮುಖಂಡರಾದ ಓಹಿಲಯ್ಯ, ರಾಕೇಶ್, ಯತೀಶ್, ಷಣ್ಮುಖ, ಪಿ.ಎಲ್.ಕುಮಾರ್, ಜಲೇಂದ್ರ ಮತ್ತಿತರರು ಇದ್ದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಎಂಸಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಮತ್ತು ಸಿಬ್ಬಂದಿ ರೈತರೊಂದಿಗೆ ಸಭ್ಯತೆಯಿಂದ ವರ್ತಿಸದೆ ಉಡಾಫೆಯಿಂದ ನಡೆದುಕೊಳ್ಳುತ್ತಾರೆ ಎಂದು ರೈತರು ದೂರಿದರು.

ಹಾಡ್ಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ರಿಯಾಯಿತಿ ದರದ ಟ್ರ್ಯಾಕ್ಟರ್ ವಿತರಣಾ ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡರಿಗೆ ದೂರಿನ ಸುರಿಮಳೆಗೈದ ರೈತರು ಕೂಡಲೇ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕರ್ತವ್ಯದ ಸಮಯದಲ್ಲಿ ಕಛೇರಿಯ ಬಾಗಿಲು ಹಾಕಿಕೊಂಡು ಬಾಡೂಟಕ್ಕೆ ತೆರಳುವ ಸಿಬ್ಬಂದಿ ಪ್ರಶ್ನಿಸುವವರ ಮೇಲೆ ಹರಿ ಹಾಯುತ್ತಾರೆಂದು ತಮ್ಮ ಅಳಲು ತೋಡಿಕೊಂಡರು.
ಸರ್ಕಾರ, ಸಹಕಾರ ಇಲಾಖೆ ಹಾಗೂ ಎಂಸಿಡಿಸಿಸಿ ಬ್ಯಾಂಕಿನ ನಿಯಮದಂತೆ ಕಾರ್ಯ ನಿರ್ವಹಿಸದ ವ್ಯವಸ್ಥಾಪಕ ಮತ್ತು ಸಿಬ್ಬಂದಿ ರೈತ ವಿರೋಧಿಗಳಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ದೂರು ಆಲಿಸಿದ ಅಧ್ಯಕ್ಷರು ಅಸಡ್ಡೆಯಿಂದ ವರ್ತಿಸುವ ಹೊಸೂರು ಎಂಸಿಡಿಸಿಸಿ ಬ್ಯಾಂಕಿನ ಸಿಬ್ಬಂದಿಯ ಹೆಸರುಗಳನ್ನು ಪಟ್ಡಿ ಮಾಡಿ ಕೂಡಲೇ ನನಗೆ ನೀಡಬೇಕೆಂದು ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ದಿನೇಶ್ ಅವರಿಗೆ ಸೂಚಿಸಿದರು.

ಆನಂತರ ಮಾತನಾಡಿದ ಅವರು ಬ್ಯಾಂಕಿನ ವ್ಯವಸ್ಥಾಪಕ ಸೇರಿದಂತೆ ಅಲ್ಲಿನ ಸಿಬ್ಬಂದಿ ರೈತರ ಹಿತಕ್ಕೆ ತಕ್ಕಂತೆ ಕೆಲಸ ಮಾಡಬೇಕು ಅದನ್ನು ಹೊರತುಪಡಿಸಿ ದುರ್ವರ್ತನೆ ತೋರಿದರೆ ಸಾಮೂಹಿಕ ವರ್ಗಾವಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular