Saturday, July 11, 2026
Google search engine

Homeರಾಜ್ಯಕಂಬಳ ಕರಾವಳಿಯಲ್ಲೇ ಇರಲಿ, ದಸರಾ ವೈಶಿಷ್ಟ್ಯ ಉಳಿಯಲಿ : ವಿಜಯೇಂದ್ರ

ಕಂಬಳ ಕರಾವಳಿಯಲ್ಲೇ ಇರಲಿ, ದಸರಾ ವೈಶಿಷ್ಟ್ಯ ಉಳಿಯಲಿ : ವಿಜಯೇಂದ್ರ

ಮೈಸೂರು/ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ಕಂಬಳ ಸ್ಪರ್ಧೆ ನಡೆಸುವ ಅಗತ್ಯವಿಲ್ಲ. ಸರ್ಕಾರ ಯಾವುದೇ ಹಠಕ್ಕೆ ಬೀಳದೆ, ಮೈಸೂರು ಭಾಗದ ಜನರ ಸಾಂಸ್ಕೃತಿಕ ಭಾವನೆಗಳು ಮತ್ತು ದಸರಾದ ಪರಂಪರೆಗೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಕರಾವಳಿ ಭಾಗದ ಕಂಬಳ ಕ್ರೀಡೆಗೆ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವಿದ್ದು, ಅದನ್ನು ಗೌರವಿಸುತ್ತೇವೆ. ಸರ್ಕಾರಕ್ಕೆ ಕಂಬಳದ ಮೇಲೆ ನಿಜವಾದ ಆಸಕ್ತಿ ಇದ್ದರೆ ಕರಾವಳಿ ಜಿಲ್ಲೆಗಳಲ್ಲೇ ಅದನ್ನು ಇನ್ನಷ್ಟು ಅದ್ದೂರಿಯಾಗಿ ಆಯೋಜಿಸಲಿ. ಆದರೆ ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನು ಮೈಸೂರು ದಸರಾ ಆಚರಣೆಯೊಂದಿಗೆ ಬೆರೆಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಅಲ್ಲದೆ ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ, ನಂಬಿಕೆ ಮತ್ತು ಭೌಗೋಳಿಕ ವೈಶಿಷ್ಟ್ಯದ ಪ್ರತೀಕವಾಗಿದೆ. ಅದನ್ನು ಮೈಸೂರಿಗೆ ತರುವುದರಿಂದ ಅದರ ದೈವಿಕ ಹಿನ್ನೆಲೆ ಹಾಗೂ ಪಾವಿತ್ರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಮೈಸೂರು ಮತ್ತು ಕರಾವಳಿ ಎರಡೂ ಭಾಗಗಳ ಜನರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಈಗಾಗಲೇ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

RELATED ARTICLES
- Advertisment -
Google search engine

Most Popular