ಬೆಂಗಳೂರು : ‘ಜೀನ್’ ಎಂಬ ಪದವನ್ನು ನಾನು ರಾಮನಗರದಲ್ಲಿ ನಡೆದ ಸಾಮೂಹಿಕ ಎಸ್‌ಐಆರ್ ಅರ್ಜಿ ವಿತರಣೆ ಹಾಗೂ ಕುಣಿಗಲ್‌ನ ಬೂತ್ ಸಂಖ್ಯೆ 19ರ ವಿದ್ಯಮಾನಕ್ಕೆ ಹೋಲಿಸಿ ಸಾಮಾನ್ಯ ಅರ್ಥದಲ್ಲಿ ಬಳಸಿದ್ದೇ ಹೊರತು, ಯಾವುದೇ ವೈಯಕ್ತಿಕ ನಿಂದನೆಯ ಉದ್ದೇಶವಿರಲಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕಾರಣ ಮತ್ತು ಆದರ್ಶಗಳಲ್ಲಿ ಬೆಳೆದ ನನಗೆ ಯಾರ ವಿರುದ್ಧವೂ ವೈಯಕ್ತಿಕ ವಾಗ್ದಾಳಿ ನಡೆಸುವುದು ರಾಜಕೀಯ ಸಂಸ್ಕಾರವಲ್ಲ. ಅಂತಹ ರಾಜಕಾರಣದಲ್ಲಿ ನನಗೆ ನಂಬಿಕೆಯೂ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಹಿಂದೆ ಜೆಡಿಎಸ್‌ನಲ್ಲಿದ್ದು ಈಗ ಬೇರೆ ಪಕ್ಷದಲ್ಲಿರುವ ಕೆಲ ಶಾಸಕರು ತಮ್ಮ ತಂದೆ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಿರಂತರವಾಗಿ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವಾಗ ನಿಮ್ಮ ಕಳಕಳಿ ಎಲ್ಲಿತ್ತು ಎಂದು ರಂಗನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಮುಂದುವರೆದು ಕುಮಾರಣ್ಣನವರ ರಾಜಕೀಯ ಅನುಭವಕ್ಕಿಂತಲೂ ಕಡಿಮೆ ವಯಸ್ಸಿನ ಶಾಸಕರೊಬ್ಬರು “ಖಬರ್ದಾರ್ ಕುಮಾರಣ್ಣ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದಾಗ ನೀವು ಧ್ವನಿ ಎತ್ತಿದ್ದರೆ ನಿಮ್ಮ ನಿಲುವನ್ನು ಗೌರವಿಸುತ್ತಿದ್ದೆವು. ಅಧಿಕಾರಕ್ಕಾಗಿ ಇಂತಹ ಇಬ್ಬಂದಿ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ’ ಎಂದು ನಿಖಿಲ್ ಟೀಕಿಸಿದ್ದಾರೆ. ಅಲ್ಲದೆ ಇನ್ನು ಮುಂದಾದರೂ ವೈಯಕ್ತಿಕ ಕೆಸರೆರಚಾಟವನ್ನು ಬಿಟ್ಟು ಜನರ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದು ಅವರು ಕರೆ ನೀಡಿದ್ದಾರೆ.



