Thursday, April 30, 2026
Google search engine

Homeಸ್ಥಳೀಯಸಾರ್ವಜನಿಕರು ಯಾವುದೇ ಜ್ವರ ಕಂಡುಬಂದರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ : ಡಾ. ಎಸ್. ಚಿದಂಬರ

ಸಾರ್ವಜನಿಕರು ಯಾವುದೇ ಜ್ವರ ಕಂಡುಬಂದರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ : ಡಾ. ಎಸ್. ಚಿದಂಬರ

ಚಾಮರಾಜನಗರ :  ಸಾರ್ವಜನಿಕರು ಯಾವುದೇ ಬಗೆಯ ಜ್ವರ ಕಂಡುಬಂದರೂ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ಎಂದು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ   ತಿಳಿಸಿದರು.

  ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಮಲೇರಿಯಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ  ಮಾತನಾಡಿದರು.

ಪ್ರತಿದಿನ ನಾವು ಮಲೇರಿಯಾ ಬಗ್ಗೆ ಹೋರಾಡಬೇಕಿದೆ. ಜನರಿಗೆ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಬೇಕು. ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾರ್ವಜನಿಕರು ಯಾವುದೇ ಬಗೆಯ ಜ್ವರ ಇದ್ದರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ಎಂದು ದೃಢಪಟ್ಟಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

 ಸಾರ್ವಜನಿಕರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು. ಸೊಳ್ಳೆ ನಿಯಂತ್ರಣಕ್ಕೆ ನೀರು ಶೇಖರಣಾ ಪರಿಕರಗಳನ್ನು ಮುಚ್ಚಿಟ್ಟುಕೊಳ್ಳಬೇಕು. ವಾರಕೊಮ್ಮೆ ತೊಟ್ಟಿಗಳಿಂದ ಸಂಪೂರ್ಣವಾಗಿ ನೀರನ್ನು ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸಿಕೊಳ್ಳಬೇಕು. ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಬಳಸಿ ಸೊಳ್ಳೆ ಕಡಿತದಿಂದ ದೂರವಿರಬೇಕು ಎಂದು ಹೇಳಿದರು.

 ಆರೋಗ್ಯ ಇಲಾಖೆಯಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೀನು ಸಾಕಾಣಿಕೆ ತೊಟ್ಟಿಗಳನ್ನು ನಿರ್ಮಿಸಿ ಗಪ್ಪಿ ಮತ್ತು ಗ್ಯಾಂಬೋಸಿಯ ಮೀನು ಮರಿಗಳನ್ನು ಬೆಳೆಸಿ ಕೆರೆ ಕಟ್ಟೆಗಳಿಗೆ ಮೀನು ಮರಿಗಳನ್ನು ಬಿಟ್ಟು ಸೊಳ್ಳೆ ನಿಯಂತ್ರಣ ಮಾಡಲಾಗುತ್ತಿದೆ. ಮಲೇರಿಯಾ ನಿಯಂತ್ರಣದ ಬಗ್ಗೆ ಗ್ರಾಮ ಪಂಚಾಯಿತಿ, ಮೀನುಗಾರಿಕೆ ಇಲಾಖೆ, ನಗರಾಭಿವೃದ್ಧಿ ಹಾಗೂ ಗಣಿಗಾರಿಕೆ ಇಲಾಖೆಗಳು ಸಮನ್ವಯ ಸಾಧಿಸಿ, ಮಲೇರಿಯ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು. 

    ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿ ಡಾ. ಸುಂದರೇಶ್ ಅವರು ಮಾತನಾಡಿ ಮಲೇರಿಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಲಾರ್ವ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿಯಂತ್ರಣ ಮಾಡುತ್ತಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಕಮಲ, ಆರೋಗ್ಯ ನಿರೀಕ್ಷಣಾಧಿಕಾರಿ ಭಾಸ್ಕರ್, ಕೀಟ ಶಾಸ್ತ್ರಜ್ಞರಾದ ರೇಖಾ, ಕೀಟ ಸಂಗ್ರಹಗಾರರಾದ ರಾಹುಲ್, ಎನ್‍ವಿಬಿಡಿಸಿಪಿ ಕಚೇರಿಯ ಶಶಿಕುಮಾರ್, ವೇದಾವತಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular