ಬೆಂಗಳೂರು : ಮಾದಪಟ್ಟಣ ಗ್ರಾಮದ ಸಮೀಪದ ಕಾವೇರಿ ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದು, ಬಸವೇಶ್ವರ ಕ್ವಾರಿಯನ್ನು ಉಪಗುತ್ತಿಗೆಗೆ ಪಡೆದಿದ್ದ ಪಾಂಡುರಂಗ, ಬಸವೇಶ್ವರ ಕ್ವಾರಿಯ ಮ್ಯಾನೇಜರ್ ಉಮಾಪತಿ ಹಾಗೂ ಕಾವೇರಿ (ಉದಯ್) ಕ್ವಾರಿಯ ಮ್ಯಾನೇಜರ್ ರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರದ ಕುರಿತು ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಘಟನೆಗೆ ಕಾರಣವಾದರೆಂದು ಶಂಕಿಸಲಾಗಿರುವ ಬಸವೇಶ್ವರ ಕ್ವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆಸಿಬಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದುರಂತದಲ್ಲಿ ಮೃತಪಟ್ಟ ಏಳು ಕಾರ್ಮಿಕರ ಪೈಕಿ ನಾಲ್ವರು ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೂವರು ಕಾರ್ಮಿಕರ ಮೃತದೇಹಗಳು ಆರ್.ಆರ್. ಆಸ್ಪತ್ರೆಯ ಶವಾಗಾರದಲ್ಲಿದ್ದು, ಸಂಬಂಧಿಕರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆಯಲ್ಲಿ ಗಾಯಗೊಂಡ ಐವರು ಕಾರ್ಮಿಕರು ಆರ್.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಸುಮಾರು 7.30ರ ವೇಳೆಗೆ ಕಾವೇರಿ (ಉದಯ್) ಕ್ವಾರಿಯಲ್ಲಿ ಬೃಹತ್ ಬಂಡೆಗಳು ಕುಸಿದು ಬಿದ್ದ ಪರಿಣಾಮ ಏಳು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ನಾಲ್ಕು ವಾಹನಗಳು ಕೂಡ ಜಖಂಗೊಂಡಿದ್ದವು. ಪ್ರಕರಣ ದಾಖಲಿಸಿಕೊಂಡಿರುವ ತಾವರೆಕೆರೆ ಠಾಣೆ ಪೊಲೀಸರು ದುರಂತಕ್ಕೆ ನಿಖರ ಕಾರಣವೇನು ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.



