Friday, July 3, 2026
Google search engine

Homeಕ್ರೀಡೆಫಿಫಾ ವಿಶ್ವಕಪ್ 2026 : ಕ್ರೊಯೇಷಿಯಾ ವಿರುದ್ಧ 2-1 ಗೆಲುವು; ರೌಂಡ್ ಆಫ್ 16 ಹಂತಕ್ಕೆ...

ಫಿಫಾ ವಿಶ್ವಕಪ್ 2026 : ಕ್ರೊಯೇಷಿಯಾ ವಿರುದ್ಧ 2-1 ಗೆಲುವು; ರೌಂಡ್ ಆಫ್ 16 ಹಂತಕ್ಕೆ ಪೋರ್ಚುಗಲ್ ಲಗ್ಗೆ!

ಟೊರೊಂಟೊ : ಇಲ್ಲಿನ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ರೋಮಾಂಚಕಾರಿ ರೌಂಡ್ ಆಫ್ 32 ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಪೋರ್ಚುಗಲ್, ರೌಂಡ್ ಆಫ್ 16 ಹಂತಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಕ್ರೊಯೇಷಿಯಾದ ವಿಶ್ವಕಪ್ ಅಭಿಯಾನ ಕೊನೆಗೊಂಡಿದ್ದು, ಪೋರ್ಚುಗಲ್ ಜುಲೈ 7 ರಂದು ನಡೆಯಲಿರುವ ರೌಂಡ್ ಆಫ್ 16 ರಣರೋಚಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟ

ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಬಲಿಷ್ಠ ರಕ್ಷಣಾತ್ಮಕ (Defense) ಆಟಕ್ಕೆ ಒತ್ತು ನೀಡಿದವು. ಪೋರ್ಚುಗಲ್ ಸತತ ದಾಳಿ ನಡೆಸಿ ಕ್ರೊಯೇಷಿಯಾದ ಮೇಲೆ ಒತ್ತಡ ಹೇರಲು ಯತ್ನಿಸಿತು.

ಪಂದ್ಯದ 10ನೇ ನಿಮಿಷದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ಹೆಡರ್ ಮೂಲಕ ಗೋಲು ಗಳಿಸುವ ಸುಲಭ ಅವಕಾಶವೊಂದನ್ನು ಕೈಚೆಲ್ಲಿದರು.

ಮೊದಲಾರ್ಧದಲ್ಲಿ ಪೋರ್ಚುಗಲ್ ಶೇ. 60 ರಷ್ಟು ಹಾಗೂ ಕ್ರೊಯೇಷಿಯಾ ಶೇ. 28 ರಷ್ಟು ಬಾಲ್ ಪೊಸೆಷನ್ ಹೊಂದಿದ್ದವು.

ಪೋರ್ಚುಗಲ್ ಗೋಲಿಗಾಗಿ 9 ಬಾರಿ ಪ್ರಯತ್ನಿಸಿದರೆ, ಕ್ರೊಯೇಷಿಯಾ 3 ಬಾರಿ ಯತ್ನಿಸಿತು. ಆದರೆ, ಬಲಿಷ್ಠ ಡಿಫೆನ್ಸ್‌ನಿಂದಾಗಿ ಮೊದಲ 45 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ದ್ವಿತೀಯಾರ್ಧದಲ್ಲಿ ರೋಮಾಂಚನ ಮತ್ತು ರೊನಾಲ್ಡೊ ದಾಖಲೆ

ದ್ವಿತೀಯಾರ್ಧವು ತೀವ್ರ ಕುತೂಹಲದಿಂದ ಕೂಡಿತ್ತು. ಪಂದ್ಯದ 53ನೇ ನಿಮಿಷದಲ್ಲಿ ಕ್ರೊಯೇಷಿಯಾದ ಇವಾನ್ ಪೆರಿಸಿಕ್ ಅದ್ಭುತ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ ಪೋರ್ಚುಗಲ್ ಈ ಮುನ್ನಡೆಯನ್ನು ಹೆಚ್ಚು ಹೊತ್ತು ಉಳಿಯಲು ಬಿಡಲಿಲ್ಲ.

ರೊನಾಲ್ಡೊ ಪೆನಾಲ್ಟಿ ಗೋಲು: 64ನೇ ನಿಮಿಷದಲ್ಲಿ ಪೋರ್ಚುಗಲ್‌ನ ಕಾರ್ನರ್ ಕಿಕ್ ವೇಳೆ ಕ್ರೊಯೇಷಿಯಾದ ನಿಕೋಲಾ ವ್ಲಾಸಿಚ್ ಅವರು ಪೋರ್ಚುಗಲ್‌ನ ವೇಗಾ ಅವರನ್ನು ತಡೆಯಲು ಯತ್ನಿಸಿದರು. VAR (ವಿಡಿಯೋ ಅಸಿಸ್ಟೆಂಟ್ ರೆಫರಿ) ಪರಿಶೀಲನೆ ನಡೆಸಿದ ರೆಫರಿ, ಇದು ಫೌಲ್ ಎಂದು ನಿರ್ಣಯಿಸಿ ಪೋರ್ಚುಗಲ್‌ಗೆ ಪೆನಾಲ್ಟಿ ನೀಡಿದರು.

ಈ ಅವಕಾಶವನ್ನು ಬಳಸಿಕೊಂಡ ರೊನಾಲ್ಡೊ ಭರ್ಜರಿ ಗೋಲು ಬಾರಿಸಿ ಸ್ಕೋರ್ 1-1 ಸಮಬಲಗೊಳಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದ ನಾಕೌಟ್ ಪಂದ್ಯದಲ್ಲಿ ರೊನಾಲ್ಡೊ ಗಳಿಸಿದ ಮೊದಲ ಗೋಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬಳಿಕ 81ನೇ ನಿಮಿಷದಲ್ಲಿ ರೊನಾಲ್ಡೊ ಬದಲಿಗೆ ರುಬೆನ್ ನೆವೆಸ್ ಮೈದಾನಕ್ಕಿಳಿದರು.

ಹೆಚ್ಚುವರಿ ಸಮಯದ ಹೈಡ್ರಾಮಾ

ನಿಗದಿತ 90 ನಿಮಿಷಗಳಲ್ಲಿ ಸ್ಕೋರ್ 1-1 ಸಮಬಲವಾಗಿದ್ದರಿಂದ ಪಂದ್ಯವು ಹೆಚ್ಚುವರಿ ಸಮಯಕ್ಕೆ (Injury Time) ತಲುಪಿತು.

ಗೆಲುವಿನ ಗೋಲು : ಇಂಜುರಿ ಟೈಮ್‌ನಲ್ಲಿ ರಾಫೆಲ್ ಲಿಯಾವೊ ನೀಡಿದ ಪಾಸ್ ಅನ್ನು ಗೊಂಜಾಲೊ ರಾಮೋಸ್ ಅದ್ಭುತ ಹೆಡರ್ ಮೂಲಕ ಗೋಲಾಗಿಸಿ ಪೋರ್ಚುಗಲ್‌ಗೆ 2-1 ಮುನ್ನಡೆ ತಂದುಕೊಟ್ಟರು.

ಪಂದ್ಯದ 90+15 ನೇ ನಿಮಿಷದಲ್ಲಿ ಕ್ರೊಯೇಷಿಯಾ ಗೋಲು ಬಾರಿಸಿ ಸಂಭ್ರಮಾಚರಣೆ ಮಾಡಿತು. ಆದರೆ ಪೋರ್ಚುಗಲ್ ಆಟಗಾರರ ಮನವಿ ಮೇರೆಗೆ ರೆಫರಿ VAR ಪರಿಶೀಲನೆ ನಡೆಸಿದರು. ಜೋಸ್ಕೋ ಗ್ವಾರ್ಡಿಯೋಲ್ ಅವರು ಮಾರಿಯೋ ಪಾಸಾಲಿಕ್‌ಗೆ ಚೆಂಡನ್ನು ಪಾಸ್ ಮಾಡಿದಾಗ ಪಾಸಾಲಿಕ್ ‘ಆಫ್‌ಸೈಡ್’ (Offside) ಆಗಿರುವುದು ಕಂಡುಬಂದಿದ್ದರಿಂದ ಆ ಗೋಲನ್ನು ಅಮಾನ್ಯಗೊಳಿಸಲಾಯಿತು. ಅಂತಿಮವಾಗಿ ಪೋರ್ಚುಗಲ್ 2-1 ಅಂತರದಲ್ಲಿ ಜಯಭೇರಿ ಬಾರಿಸಿತು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular