Friday, July 3, 2026
Google search engine

Homeರಾಜ್ಯಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ಮೈಸೂರು ವಿವಿ ಎದುರು ಸಂಶೋಧನಾ ವಿದ್ಯಾರ್ಥಿಗಳ ಹೋರಾಟ

ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ಮೈಸೂರು ವಿವಿ ಎದುರು ಸಂಶೋಧನಾ ವಿದ್ಯಾರ್ಥಿಗಳ ಹೋರಾಟ

ಮೈಸೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ನಗರದ ಪುರಭವನದಿಂದ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಾಕಿ ಇರುವ ಶಿಷ್ಯವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 15 ದಿನಗಳಿಂದ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ವಿಶ್ವವಿದ್ಯಾಲಯ ಆಡಳಿತದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರಲ್ಲದೆ, 90ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಪೈಕಿ ಕೇವಲ 20 ಮಂದಿಗೆ ಮಾತ್ರ ಶಿಷ್ಯವೇತನ ನೀಡುವುದಾಗಿ ವಿಶ್ವವಿದ್ಯಾಲಯ ತಿಳಿಸಿರುವುದು ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.

ಶಿಷ್ಯವೇತನ ಬಿಡುಗಡೆಯಾಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ ಪ್ರತಿಭಟನಾಕಾರರು, “ಶಿಷ್ಯವೇತನ ಪಡೆಯುವುದು ನಮ್ಮ ಹಕ್ಕು” ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ 2 ಕೋಟಿ ರೂಪಾಯಿ ಶಿಷ್ಯವೇತನ ಮಂಜೂರು ಮಾಡಬೇಕು, ಲ್ಯಾಪ್‌ಟಾಪ್‌ಗಳನ್ನು ವಿತರಿಸಬೇಕು, ಮಾಸಿಕ ಹಾಸ್ಟೆಲ್ ಬಾಡಿಗೆಯನ್ನು ರದ್ದುಪಡಿಸಬೇಕು, ಉಚಿತ ಭೋಜನ ವ್ಯವಸ್ಥೆ ಮುಂದುವರಿಸಬೇಕು, ಮಹಿಳಾ ಸಂಶೋಧಕಿಯರ ಮೇಲಿನ ದೌರ್ಜನ್ಯ ತಡೆಯಬೇಕು ಹಾಗೂ ಪಿಎಚ್‌ಡಿ ಪ್ರವೇಶ, ನೋಂದಣಿ ಮತ್ತು ವಾರ್ಷಿಕ ಶುಲ್ಕಗಳನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ನಟ ಚೇತನ್, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡತೊರೆ ಮಹದೇವಯ್ಯ, ಕೆಆರ್‌ಎಸ್ ಪಕ್ಷದ ನಾಗರಾಜ, ವೆಂಕಟಪ್ಪ, ಶಂಕರ್ ರಾಮಲಿಂಗ, ಸೋಸಲೆ ಸಿದ್ದರಾಜು, ಸೋಮಯ್ಯ ಮಲೆಯೂರು, ದೇವನೂರು ಪುಟ್ಟನಂಜಯ್ಯ,ಪಿ.ಮರಂಕಯ್ಯ ಇತರರು ಇದ್ದರು.


RELATED ARTICLES
- Advertisment -
Google search engine

Most Popular