ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಇದೀಗ ತೀವ್ರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಬೆಂಗಳೂರಿನ ಜಯನಗರದಲ್ಲಿ ಮಸೀದಿಯೊಳಗೆ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದು, ಇದು ಚುನಾವಣಾ ನಿಯಮಗಳ ಉಲ್ಲಂಘನೆ ಎಂದು ದೂರಿದ್ದಾರೆ. ಅಲ್ಲದೆ, ಸರ್ಕಾರದ ನಡೆ ಪ್ರಶ್ನಾರ್ಹವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, ಅಧಿವೇಶನ ಮುಂದೂಡಿಕೆಗೆ ಎಸ್ಐಆರ್ ಕಾರಣವಲ್ಲ. ಸಂಪುಟ ವಿಸ್ತರಣೆಗೂ ಒಳರಾಜಕೀಯ ಕಾರಣಗಳೇ ಇವೆ. ಶಾಸಕರೇ ಮನೆ ಮನೆಗೆ ಹೋಗಿ ಎಸ್ಐಆರ್ ಮಾಡುತ್ತಾರಾ? ಬಿಎಲ್ಒಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಜಯನಗರದ ಮಸೀದಿ ಒಳಗೆ ಪ್ರಕ್ರಿಯೆ ನಡೆದಿರುವುದಾಗಿ ಹೇಳಿದ ಅವರು, ಅಲ್ಲಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರಲ್ಲದೆ, ಈ ಹಿನ್ನೆಲೆ ರಾಜ್ಯ ಸರ್ಕಾರದ ಮೇಲೆ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಇದೇ ವಿಷಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮ ನಡೆಸುತ್ತಿದೆ. ಬಾಂಗ್ಲಾದೇಶದಿಂದ ಬಂದ ನುಸುಳುಕೋರರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ರಾಮನಗರ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಗೆ ಅಕ್ರಮ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪಗಳನ್ನೂ ಕುಮಾರಸ್ವಾಮಿ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಸೇರಿಸಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ. ಎಸ್ಐಆರ್ ಪ್ರಕ್ರಿಯೆ ಕುರಿತ ಈ ಪರಸ್ಪರ ಆರೋಪ–ಪ್ರತ್ಯಾರೋಪಗಳಿಂದ ರಾಜ್ಯ ರಾಜಕೀಯದಲ್ಲಿ ಹೊಸ ತೀವ್ರತೆ ಉಂಟಾಗಿದ್ದು, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕುರಿತು ಚರ್ಚೆ ಮತ್ತಷ್ಟು ಗಂಭೀರವಾಗಿದೆ.



