ಜಗದಲ್ ಪುರ : “ಛತ್ತೀಸಗಢದ ಬಸ್ತಾರ್ ಪ್ರದೇಶವು ಈಗ ನಕ್ಸಲಿಸಂ ಭೀತಿಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ಇಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಂಗಳವಾರ ಜಗದಲ್ ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ತಾರ್ ಜನರ ಮುಖದಲ್ಲಿ ಈಗ ಉತ್ಸಾಹ, ಆತ್ಮವಿಶ್ವಾಸ ಮತ್ತು ಭವಿಷ್ಯದ ಭರವಸೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಬಂದೂಕಿನ ನೆರಳಿನಲ್ಲಿ ಬದುಕುವ ಕಾಲ ಮುಗಿದಿದ್ದು, ಇಡೀ ಬಸ್ತಾರ್ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ ಎಂದರು.
ತಮ್ಮ ಭಾಷಣದಲ್ಲಿ ಗೃಹ ಸಚಿವರು ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಅದರ ನಂತರದ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದರು. ಛತ್ತೀಸಗಢದಲ್ಲಿ ವಿಷ್ಣು ದೇವ್ ಸಾಯ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನ. ಕೇಂದ್ರದಲ್ಲಿ ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇತ್ತು, ಆದರೆ ರಾಜ್ಯದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದಿಂದಾಗಿ ನಕ್ಸಲಿಸಂ ವಿರುದ್ಧ ನಿರೀಕ್ಷಿತ ಸಹಕಾರ ಸಿಗಲಿಲ್ಲ ಎಂದು ಶಾ ಆರೋಪಿಸಿದರು.
ಎಲ್ಲಾ ರಾಜ್ಯಗಳ ಡಿಜಿಪಿಗಳ ಸಭೆಯ ನಂತರ, ಮಾರ್ಚ್ 31, 2026 ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾದ ದಿನ.
ಭದ್ರತಾ ಪಡೆಗಳ ಪರಾಕ್ರಮ, ಧೈರ್ಯ ಮತ್ತು ಬಲಿದಾನದ ಫಲವಾಗಿ, ಅವಧಿಗಿಂತ ಮುಂಚಿತವಾಗಿಯೇ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಐತಿಹಾಸಿಕ ದಿನ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಪೂರ್ಣ ಅಭಿವೃದ್ಧಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಲಾದ ಅತ್ಯಂತ ಪ್ರಮುಖ ದಿನ.
“ಅಭಿವೃದ್ಧಿ ತಲುಪದ ಕಾರಣ ನಕ್ಸಲಿಸಂ ಹರಡಿತು ಎಂದು ಕೆಲವು ಬುದ್ಧಿಜೀವಿಗಳು ವರ್ಷಗಳ ಕಾಲ ಹೇಳುತ್ತಿದ್ದರು. ಆದರೆ ನಕ್ಸಲಿಸಂ ಇದ್ದ ಕಾರಣಕ್ಕಾಗಿಯೇ ಈ ಪ್ರದೇಶಗಳಿಗೆ ಅಭಿವೃದ್ಧಿ ತಲುಪಲು ಸಾಧ್ಯವಾಗಿರಲಿಲ್ಲ ಎಂಬುದೇ ನಿಜವಾದ ಸತ್ಯ” ಎಂದು ಅಮಿತ್ ಶಾ ಈ ಸಂದರ್ಭದಲ್ಲಿ ತಿರುಗೇಟು ನೀಡಿದರು.
ಭದ್ರತಾ ಕ್ಯಾಂಪ್‌ಗಳು ಇನ್ನು ‘ಸೇವಾ ಕೇಂದ್ರಗಳು’
ಬಸ್ತಾರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈಗ ಹೊಸ ಯೋಜನೆಗಳ ಕೆಲಸ ಆರಂಭಿಸಿದೆ ಎಂದು ಗೃಹ ಸಚಿವರು ತಿಳಿಸಿದರು. ಇತ್ತೀಚೆಗಷ್ಟೇ ಹಮ್ಮಿಕೊಳ್ಳಲಾದ ‘ಶಹೀದ್ ವೀರ್ ಗುಂಡಾಧುರ್ ಸೇವಾ ಡೇರಾ’ ಯೋಜನೆಯ ಬಗ್ಗೆ ಅವರು ಮಾಹಿತಿ ನೀಡಿದರು.
ನಕ್ಸಲಿಸಂ ವಿರುದ್ಧ ಹೋರಾಡಲು ಗೃಹ ಸಚಿವಾಲಯವು ಈ ಭಾಗದಲ್ಲಿ ಸಿಎಪಿಎಫ್ (CAPF), ಡಿಆರ್‌ಜಿ (DRG) ಮತ್ತು ಛತ್ತೀಸಗಢ ಪೊಲೀಸರ ಸುಮಾರು 200 ಭದ್ರತಾ ಕ್ಯಾಂಪ್‌ಗಳನ್ನು ಸ್ಥಾಪಿಸಿತ್ತು.
ಈಗ ನಕ್ಸಲಿಸಂ ಕೊನೆಗೊಂಡಿರುವುದರಿಂದ, ಇವುಗಳಲ್ಲಿ 70 ಕ್ಯಾಂಪ್‌ಗಳನ್ನು “ಶಹೀದ್ ವೀರ್ ಸೇವಾ ಡೇರಾ” (ಅಭಿವೃದ್ಧಿ ಹಾಗೂ ಸೇವಾ ಕೇಂದ್ರಗಳು) ಆಗಿ ಪರಿವರ್ತಿಸಲಾಗುವುದು.
ಬುಡಕಟ್ಟು ಕುಟುಂಬಗಳ ಆರ್ಥಿಕ ಪ್ರಗತಿಗೆ ಯೋಜನೆ
ಈ ಸೇವಾ ಕೇಂದ್ರಗಳ ಮೂಲಕ ಬಸ್ತಾರ್‌ನ ಪ್ರತಿಯೊಂದು ಬುಡಕಟ್ಟು (ಆದಿವಾಸಿ) ಕುಟುಂಬಕ್ಕೆ ಒಂದು ಹಸು ಮತ್ತು ಒಂದು ಎಮ್ಮೆಯನ್ನು ನೀಡಲಾಗುವುದು. ಸಹಕಾರಿ ಮಾದರಿಯ (Co-operative model) ಮೂಲಕ ಅವರ ಹಾಲನ್ನು ದೇಶಾದ್ಯಂತ ಮಾರಾಟ ಮಾಡಲಾಗುವುದು. ಇದರಿಂದ ಆದಿವಾಸಿ ಕುಟುಂಬಗಳ ಆದಾಯ ಹೆಚ್ಚಲಿದ್ದು, ಇಡೀ ಪ್ರದೇಶವು ಆರ್ಥಿಕವಾಗಿ ಬಲಗೊಳ್ಳಲಿದೆ. ಬಸ್ತಾರ್‌ನಲ್ಲಿ ಇನ್ನು ಭಯದ ವಾತಾವರಣ ಇರುವುದಿಲ್ಲ, ಬದಲಿಗೆ ಅಭಿವೃದ್ಧಿ, ಉದ್ಯೋಗ ಮತ್ತು ಸಮೃದ್ಧಿಯ ಹೊಸ ಕಥೆ ಬರೆಯಲಾಗುವುದು ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.



