ಕೆ.ಆರ್.ನಗರ : ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸೋಮವಾರ ಸಂಜೆ ಪಟ್ಟಣದ ತಾಲೂಕು ಪಂಚಾಯಿತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ರಾಜ್ಯ ಪರಿಷತ್ ಸದಸ್ಯ ಶಿವಣ್ಣ ಮತ್ತು ಜಿಲ್ಲಾ ಉಪಾಧ್ಯಕ್ಷ ಚಿದಾನಂದ್ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಕೆ.ಆರ್.ನಗರ ತಾಲೂಕು ಅಧ್ಯಕ್ಷರಾಗಿ ಡಿ.ಎನ್.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಗಿರೀಶ್, ಮಹಿಳಾ ಉಪಾಧ್ಯಕ್ಷೆ ಸವಿತಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗೌರವಾಧ್ಯಕ್ಷ ಎಸ್.ಜೆ. ರಮೇಶ್, ಖಜಾಂಚಿ ಉಮೇಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಸಂತೋಷ್, ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿನಿ ಅವರುಗಳನ್ನು ಆಯ್ಕೆ ಮಾಡಲಾಯಿತು.
ಸಾಲಿಗ್ರಾಮ ತಾಲೂಕು ಘಟಕಕ್ಕೆ ಕೆ.ಎಸ್.ಭಾಸ್ಕರ್, ಉಪಾಧ್ಯಕ್ಷ ಸ್ವಾಮೀಗೌಡ, ಮಹಿಳಾ ಉಪಾಧ್ಯಕ್ಷ ಸರಳ, ಗೌರವಾಧ್ಯಕ್ಷ ಷಡಕ್ಷರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಪ್ರತಾಪ್, ಕ್ರೀಡಾ ಕಾರ್ಯದರ್ಶಿ ಕೆ.ನವೀನ್, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್, ಖಜಾಂಚಿ ಧನಂಜಯ್, ಸಂಘಟನಾ ಕಾರ್ಯದರ್ಶಿ ಬ್ಯಾಡರಹಳ್ಳಿರಾಜೇಶ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಡಿ.ಎನ್.ಚಂದ್ರಶೇಖರ್ ಮಾತನಾಡಿ ಅವಿರೋಧವಾಗಿ ನಾವೆಲ್ಲರೂ ಚುನಾಯಿತರಾಗಲು ಕಾರಣರಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಭಾರಿಯಾಗಿದ್ದು ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಸಾಲಿಗ್ರಾಮ ತಾಲೂಕು ಅಧ್ಯಕ್ಷ ಕೆ.ಎಸ್.ಭಾಸ್ಕರ್ ಮಾತನಾಡಿ ಸಂಘದ ಸರ್ವ ಸದಸ್ಯರ ಹಿತಕಾಯುವುದರೊಂದಿಗೆ ಭವಿಷ್ಯದಲ್ಲಿ ಎಲ್ಲರಿಗೂ ಸಹಕಾರಿಯಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದು ಅದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿಕೊಂಡರು.



