ನವದೆಹಲಿ : ಮತದಾರರ ಪಟ್ಟಿಯನ್ನು ಮತ್ತಷ್ಟು ಶುದ್ಧ, ನಿಖರ ಮತ್ತು ನವೀಕೃತಗೊಳಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR – Special Intensive Revision) ಅಭಿಯಾನದ ಮೂರನೇ ಹಂತವನ್ನು ಘೋಷಿಸಿದೆ. ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಪಿತ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಹಂತ ಹಂತವಾಗಿ ನಡೆಸಲಾಗುವುದು.
ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕುವುದು, ಹೊಸದಾಗಿ ಅರ್ಹತೆ ಪಡೆದ ಮತದಾರರನ್ನು ಸೇರ್ಪಡೆಗೊಳಿಸುವುದು ಮತ್ತು ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಿ ಮುಂಬರುವ ಚುನಾವಣೆಗಳಿಗೆ ಸಿದ್ಧತೆ ನಡೆಸುವುದು.
ಬಿಎಲ್ಒ (BLO) ಸಮೀಕ್ಷೆ : ಬ್ಲಾಕ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ : ಅಗತ್ಯವಿರುವ ಕಡೆಗಳಲ್ಲಿ ಮತಗಟ್ಟೆಗಳನ್ನು ಮರುಹೊಂದಿಸಲಾಗುತ್ತದೆ.
ಪ್ರಕ್ರಿಯೆಗಳು : ಕರಡು ಮತದಾರರ ಪಟ್ಟಿಯ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ ಮತ್ತು ಅವುಗಳ ಇತ್ಯರ್ಥದ ನಂತರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ನಾಗಾಲ್ಯಾಂಡ್ ಮತ್ತು ತ್ರಿಪುರದ ವೇಳಾಪಟ್ಟಿ
ಈ ಎರಡು ರಾಜ್ಯಗಳಲ್ಲಿ ಅರ್ಹತಾ ದಿನಾಂಕವನ್ನು 1 ಅಕ್ಟೋಬರ್ 2026 ಎಂದು ನಿಗದಿಪಡಿಸಲಾಗಿದೆ.
ನಾಗಾಲ್ಯಾಂಡ್ : ಸಿದ್ಧತೆ ಮತ್ತು ತರಬೇತಿ (ಆಗಸ್ಟ್ 05 – 14), ಮನೆ ಮನೆ ಸಮೀಕ್ಷೆ (ಆಗಸ್ಟ್ 16 – ಸೆಪ್ಟೆಂಬರ್ 14), ಕರಡು ಪಟ್ಟಿ ಪ್ರಕಟಣೆ (ಸೆಪ್ಟೆಂಬರ್ 20), ಆಕ್ಷೇಪಣೆ ಸಲ್ಲಿಕೆ (ಸೆಪ್ಟೆಂಬರ್ 20 – ಅಕ್ಟೋಬರ್ 20) ಮತ್ತು ಅಂತಿಮ ಪಟ್ಟಿ ಬಿಡುಗಡೆ (ನವೆಂಬರ್ 22, 2026).
ತ್ರಿಪುರ : ಸಿದ್ಧತೆ ಮತ್ತು ತರಬೇತಿ (ಸೆಪ್ಟೆಂಬರ್ 05 – 14), ಮನೆ ಮನೆ ಸಮೀಕ್ಷೆ (ಸೆಪ್ಟೆಂಬರ್ 15 – ಅಕ್ಟೋಬರ್ 14), ಕರಡು ಪಟ್ಟಿ ಪ್ರಕಟಣೆ (ಅಕ್ಟೋಬರ್ 21), ಆಕ್ಷೇಪಣೆ ಸಲ್ಲಿಕೆ (ಅಕ್ಟೋಬರ್ 21 – ನವೆಂಬರ್ 20), ಅಂತಿಮ ಪಟ್ಟಿ ಬಿಡುಗಡೆ (ಡಿಸೆಂಬರ್ 23, 2026).
ಇತರೆ ರಾಜ್ಯಗಳ ವಿವರ
01 ಜುಲೈ 2026 ಅರ್ಹತಾ ದಿನಾಂಕ ಹೊಂದಿರುವ ರಾಜ್ಯಗಳು: ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ದಾದ್ರಾ ಮತ್ತು ನಗರ ಹವೇಲಿ-ದಮನ್ ಮತ್ತು ದಿಯು, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ ಮತ್ತು ಚಂಡೀಗಢ.
01 ಅಕ್ಟೋಬರ್ 2026 ಅರ್ಹತಾ ದಿನಾಂಕ ಹೊಂದಿರುವ ರಾಜ್ಯಗಳು : ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ.
ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಈ ಕಾರ್ಯಕ್ರಮವನ್ನು ಸಂಪೂರ್ಣ ಪಾರದರ್ಶಕತೆ ಮತ್ತು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಅಭಿಯಾನವು ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.



