Monday, March 16, 2026
Google search engine

Homeಸ್ಥಳೀಯಆಡಳಿತ ವಿಳಂಬ ಖಂಡಿಸಿ ರಾಂಪ್ರಸಾದ್ ವಿನೂತನ ನಿದ್ರೆ ಚಳುವಳಿ

ಆಡಳಿತ ವಿಳಂಬ ಖಂಡಿಸಿ ರಾಂಪ್ರಸಾದ್ ವಿನೂತನ ನಿದ್ರೆ ಚಳುವಳಿ

ಕೆ.ಆರ್.ನಗರ : ತಾಲೂಕು ಆಡಳಿತದ ನಿರ್ಲಕ್ಷ್ಯಸ್ಯ ಮತ್ತು ಅಧಿಕಾರಿಗಳ ವಿಳಂಬ ನೀತಿಯನ್ನು ಖಂಡಿಸಿ ತಾಲೂಕು ವಿದ್ಯಾರ್ಥಿ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಂಪ್ರಸಾದ್ ತಾಲೂಕು ಕಛೇರಿಯ ಮುಂದೆ ನಿದ್ದೆ ಚಟುವಳಿಯ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ೧೧.೩೦ಕ್ಕೆ ತಾಲೂಕು ಕಛೇರಿಯ ಮುಂದೆ ರಗ್ಗು, ದಿಂಬು ಮತ್ತು ಚಾಪೆಯೊಂದಿಗೆ ಆಗಮಿಸಿದ ಅವರು ಮಲಗಿ ನಿದ್ರಿಸುವಂತೆ ನಟಿಸಿ ರಾಜ್ಯ ಸರ್ಕಾರ ಮತ್ತು ತಾಲೂಕು ಆಡಳಿತ ವಿರುದ್ದ ತಮ್ಮ ಅಸಹನೆ ವ್ಯಕ್ತಪಡಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು ರೈತರು ಮತ್ತು ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡುತ್ತಿಲ್ಲ ಹಾಗಾಗಿ ಅವರುಗಳನ್ನು ಹೇಳುವವರು ಕೇಳುವವರು ಇಲ್ಲದಾಗಿದ್ದು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ತಮ್ಮ ದೂರು ತೋಡಿಕೊಂಡರು.
ಕಳೆದ ೧೦ ವರ್ಷಗಳ ಹಿಂದೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಈವರೆಗೂ ಕಾರ್ಯಾರಂಭ ಮಾಡಿರುವುದರಿಂದ ಈ ಭಾಗದ ರೈತರಿಗೆ ತೀವ್ರ ತೊಂದರೆಯಾಗಿದ್ದು ಸರ್ಕಾರ ಈ ಬಗ್ಗೆ ಅಸಡ್ಡೆ ವಹಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಖರೀದಿ ಕೇಂದ್ರಕ್ಕೆ ಭತ್ತ ಸರಬರಾಜು ಮಾಡಿರುವವರಿಗೆ ಎರಡು ತಿಂಗಳಾದರೂ ಹಣ ಪಾವತಿ ಮಾಡಿಲ್ಲ ಈ ಸಮಸ್ಯೆಯನ್ನು ಯಾರಿಗೆ ತಿಳಿಸುವುದು ಎಂದು ರೈತರಿಗೆ ಗೊಂದಲವಾಗಿದ್ದು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ರಾಂಪ್ರಸಾದ್ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ ನಿತ್ಯ ಕಛೇರಿಗೆ ಅಲೆಯುವ ಸ್ಥಿತಿಯಿದೆ ಎಂದರು.
ರೈತರು ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡುವಾಗ ಸರ್ಕಾರದ ನಿಯಮಾನುಸಾರ ಪ್ರತಿ ಕ್ವಿಂಟಾಲ್‌ಗೆ ೧ ಕೆ.ಜಿ ಕಳೆಯಬೇಕು ಆದರೆ ಅದನ್ನು ೩ ಕೆ.ಜಿ ಮತ್ತು ಪ್ರತಿ ಕ್ವಿಂಟಾಲ್ ರಾಗಿಗೆ ೧ ಕೆ.ಜಿಯ ಬದಲು ೪ ಕೆ.ಜಿ. ಕಳೆದು ಹಗಲು ದರೋಡೆ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ರಂಗೇಗೌಡ ತಮ್ಮ ಜಮೀನಿನ ಖಾತೆ ಮಾಡಿಕೊಡುವುದು ವಿಳಂಭವಾಗಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು ಎಲ್ಲಾ ಇಲಾಖೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಜರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಮೈಸೂರು ಜಿಲ್ಲೆಯ ಜೀವನಾಡಿ ಮತ್ತು ಭತ್ತದ ಕಣಜವಾಗಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳನ್ನು ಸಂಪೂರ್ಣವಾಗಿ ಕಡೆಗಾಣಿಸಿದ್ದು ಆ ಮೂಲಕ ಜನವಿರೋಧಿ ನೀತಿಯನ್ನು ತೋರ್ಪಡಿಸಿದ್ದಾರೆ ಎಂದು ಖಂಡಿಸಿದರು.

ನಿದ್ರೆ ಚಳುವಳಿ ಮಾಡುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವಪ್ರಕಾಶ್ ಅವರೊಂದಿಗೆ ಆಗಮಿಸಿ ರಾಂಪ್ರಸಾದ್ ಅವರೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದರಲ್ಲದೆ ನಿಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ನಂತರ ಚಳುವಳಿ ಹಿಂಪಡೆಯಲಾಯಿತು.
ಏಕಾಂಗಿಯಾಗಿ ಸರ್ಕಾರ ಮತ್ತು ತಾಲೂಕು ಆಡಳಿತದ ವಿರುದ್ದ ವಿನೂತನವಾಗಿ ನಿದ್ರೆ ಚಟುವಳಿಯನ್ನು ಮಾಡಿದ ರಾಂಪ್ರಸಾದ್ ಅವರಿಗೆ ನೆರೆದಿದ್ದವರು ಮತ್ತು ಕೆಲವು ರೈತರು ಬೆಂಬಲ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular