ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ 2 ವರ್ಷ ರಾಜ್ಯದಲ್ಲಿ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
2026-27ನೇ ಸಾಲಿಗೆ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್ ಅವರು, ಸಿದ್ದರಾಮಯ್ಯ ವಿತ್ತ ತಜ್ಞ ಅಷ್ಟೇ ಅಲ್ಲ. ಆರ್ಥಿಕ ತಜ್ಞ ಕೂಡ ಆಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಹೊಸ ಪದಗಳನ್ನು ಬಳಸಿದ್ದಾರೆ. ಅವುಗಳನ್ನು ನಮಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದರು. ಟ್ರೋಟಿಂಗ್ ಎಕನಾಮಿ, 11ಜಿ, ಫಲಧಾರೆ, ಭಿಷತತ್ವ, ಬೆಂಕಿಯನ್ನು ಬೆಳಕಾಗಿಸುವುದು ಸೇರಿದಂತೆ ಹಲವಾರು ಪದಗಳು ಬಳಕೆಯಾಗಿದೆ. ಇವುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮುಂದಿನ ಬಜೆಟ್ ವೇಳೆ ಶಬ್ದಕೋಶವನ್ನು ಕೊಟ್ಟುಬಿಡಿ ಎಂದು ವ್ಯಂಗ್ಯವಾಡಿದರು.
ಮುಂದುವರೆದು, ನಿಮ್ಮ ಕಚೇರಿಯ ಸಹಾಯದಿಂದ ಈ ಬಜೆಟ್ಟಿನಲ್ಲಿರುವ ಹೊಸ ಪದಗಳನ್ನು ಅರ್ಥಮಾಡಿಕೊಂಡಿದ್ದೇನೆ. ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸಿದರೆ ಆಗ ಶಬ್ದಕೋಶ ಬೇಕಾಗಬಹುದು ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹೊಸ ಪದಗಳಿಗೆ ಸಚಿವ ಜಮೀರ್ ಅವರಿಂದ ಅರ್ಥ ಹೇಳಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದನ್ನು ಜಮೀರ್ ಕೇಳಿಸಿಕೊಂಡಿರಲಿಲ್ಲ. ತಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಏನು ಎಂದು ಅಶೋಕ ಅವರತ್ತ ಪ್ರಶ್ನಾರ್ಥಕವಾಗಿ ಕೇಳಿದರು. ಮಾತು ಬದಲಿಸಿದ ಅಶೋಕ್, ಮುಂದಿನ ಬಜೆಟನ್ನು ಸಿದ್ದರಾಮಯ್ಯ ಅವರೇ ಮಂಡಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಸುನೀಲ್ ಕುಮಾರ್ ಕೇಳುತ್ತಿದ್ದಾರೆ ಎಂದರು.
ತಕ್ಷಣವೇ ಉತ್ತರಿಸಿದ ಸಚಿವ ಜಮೀರ್ ಅಹದ್ ಖಾನ್, ಮುಂದಿನ ಬಜೆಟ್ ಮಾತ್ರ ಅಲ್ಲ, ಇನ್ನು ಎರಡು ಬಜೆಟ್‌ಗಳನ್ನು ಸಿದ್ದರಾಮಯ್ಯ ಅವರೇ ಮಂಡಿಸುತ್ತಾರೆ ಎಂದು ಹೇಳಿದರು.



