ಮೈಸೂರು : ಜನ ವಿಶ್ವಾಸ್ (ತಿದ್ದುಪಡಿ ವಿಧಿಗಳ) ಕಾಯ್ದೆ-2026ರಡಿ ಭಾರತೀಯ ರೈಲ್ವೆ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿದೆ. ಪರಿಷ್ಕೃತ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ಹೊಸ ನಿಯಮಗಳ ಪ್ರಕಾರ, ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸುವವರಿಗೆ ವಿಧಿಸಲಾಗುವ ಕನಿಷ್ಠ ದಂಡ ₹250ರಿಂದ ₹500ಕ್ಕೆ ಏರಿಕೆಯಾಗಿದೆ. ಅನುಮತಿಸಿದ ದೂರಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಿದರೂ ಕನಿಷ್ಠ ಹೆಚ್ಚುವರಿ ದಂಡ ₹500 ಆಗಲಿದೆ. ಆದರೆ ಗರಿಷ್ಠ ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದೇ ವೇಳೆ, ಅನಧಿಕೃತ ವ್ಯಾಪಾರ (ಹಾಕಿಂಗ್) ನಡೆಸಿದರೆ ₹2,000, ಮಹಿಳೆಯರ ಮೀಸಲು ಬೋಗಿಯಲ್ಲಿ ಪುರುಷರು ಪ್ರಯಾಣಿಸಿದರೆ ₹2,500 ಹಾಗೂ ರೈಲು ಅಥವಾ ರೈಲ್ವೆ ಆವರಣದ ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ ₹2,000 ದಂಡ ವಿಧಿಸಲಾಗುತ್ತದೆ.
ಈ ಕ್ರಮವು ಟಿಕೆಟ್ ರಹಿತ ಪ್ರಯಾಣ ತಡೆದು, ರೈಲ್ವೆ ಆದಾಯ ಸಂರಕ್ಷಣೆ ಹಾಗೂ ಪ್ರಯಾಣಿಕರ ಶಿಸ್ತನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ.



