ಚಾಮರಾಜನಗರ : ಹನೂರು ತಾಲ್ಲೂಕಿನ ನಾಲ್ ರೋಡ್‌ನಿಂದ ಗರಿಕೆಕಂಡಿವರೆಗೆ ನಡೆಯುತ್ತಿರುವ ಗುಣಮಟ್ಟದ ಡಾಂಬರೀಕರಣ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದ್ದಾರೆ.
ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆಯನ್ವಯ, ಏಪ್ರಿಲ್ 6ರಿಂದ 16ರವರೆಗೆ 6 ಚಕ್ರಗಳಿಗಿಂತ ಮೇಲ್ಪಟ್ಟ 10, 12 ಹಾಗೂ 16 ಚಕ್ರಗಳ ಟ್ರಕ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಕಾಮಗಾರಿಯ ಸುಗಮ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹನೂರು ತಾಲ್ಲೂಕಿನ ಕೊಳ್ಳೇಗಾಲ–ಚೆಲ್ಲಪಾಳ್ಯಂ ರಸ್ತೆ ಪ್ರಮುಖ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಅಂತರರಾಜ್ಯ ಸಂಪರ್ಕದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ರಾಮಾಪುರದಿಂದ ನಾಲ್ ರೋಡ್ ಭಾಗದವರೆಗೆ ಸುಮಾರು 2 ಕಿ.ಮೀ ಉದ್ದದಲ್ಲಿ ಈಗಾಗಲೇ ವೆಟ್‌ಮಿಕ್ಸ್ ಮೆಕಾಡಮ್ ಪದರ ಹಾಸಲಾಗಿದ್ದು, ಇದೀಗ ಡಾಂಬರೀಕರಣ ಕಾಮಗಾರಿ ಮುಂದುವರಿಯುತ್ತಿದೆ. ಕಾಮಗಾರಿಯ ಸಂದರ್ಭದಲ್ಲಿ ಭಾರೀ ವಾಹನಗಳ ಸಂಚಾರದಿಂದ ರಸ್ತೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ನಿರ್ಬಂಧ ಹೇರಲಾಗಿದೆ.
ಬದಲಿ ಮಾರ್ಗಗಳ ವಿವರ ಹೀಗಿದೆ :
ಬದಲಿ ಮಾರ್ಗ-1:
ರಾಜ್ಯದಿಂದ ತಮಿಳುನಾಡಿಗೆ ತೆರಳುವ ಭಾರೀ ವಾಹನಗಳು ಚಾಮರಾಜನಗರ–ಪುಣಜನೂರು–ಹಾಸನೂರು–ದಿಂಬಂ–ಸತ್ಯಮಂಗಲ ಮಾರ್ಗವನ್ನು ಬಳಸಬೇಕು.
ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ವಾಹನಗಳು ಸತ್ಯಮಂಗಲ–ದಿಂಬಂ–ಹಾಸನೂರು–ಪುಣಜನೂರು–ಚಾಮರಾಜನಗರ ಮಾರ್ಗದಲ್ಲಿ ಸಂಚರಿಸಬೇಕು.
ಬದಲಿ ಮಾರ್ಗ-2:
ರಾಜ್ಯದಿಂದ ತಮಿಳುನಾಡಿಗೆ ತೆರಳುವ ವಾಹನಗಳು ಕೊಳ್ಳೇಗಾಲ–ಹನೂರು–ಲೊಕ್ಕನಹಳ್ಳಿ–ಅರ್ಧನಾರೀಪುರ–ದಿಂಬಂ–ಸತ್ಯಮಂಗಲ ಮಾರ್ಗವನ್ನು ಬಳಸಬೇಕು.
ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ವಾಹನಗಳು ಸತ್ಯಮಂಗಲ–ದಿಂಬಂ–ಅರ್ಧನಾರೀಪುರ–ಲೊಕ್ಕನಹಳ್ಳಿ–ಹನೂರು–ಕೊಳ್ಳೇಗಾಲ ಮಾರ್ಗವನ್ನು ಅನುಸರಿಸಬೇಕು.
ಜಿಲ್ಲಾಡಳಿತವು ಸಾರ್ವಜನಿಕರು, ಸಾರಿಗೆ ಸಂಸ್ಥೆಗಳು ಹಾಗೂ ಲಾರಿ ಮಾಲೀಕರು ಈ ಬದಲಿ ಮಾರ್ಗಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ರಸ್ತೆ ಅಭಿವೃದ್ಧಿಯಿಂದ ಭವಿಷ್ಯದಲ್ಲಿ ವಾಹನ ಸಂಚಾರ ಸುಗಮವಾಗುವ ಜೊತೆಗೆ ಅಪಘಾತ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿನಂತಿಸಿದ್ದಾರೆ.



