Saturday, April 4, 2026
Google search engine

Homeರಾಜಕೀಯಕೇವಲ ಪ್ರಚಾರಕ್ಕಾಗಿ, ಉಡಾಫೆಗಾಗಿ ಇಂತಹ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ : ಸಚಿವ ಎಂ.ಬಿ.ಪಾಟೀಲ

ಕೇವಲ ಪ್ರಚಾರಕ್ಕಾಗಿ, ಉಡಾಫೆಗಾಗಿ ಇಂತಹ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ : ಸಚಿವ ಎಂ.ಬಿ.ಪಾಟೀಲ

ಬಾಗಲಕೋಟೆ : ಯುಕೆಪಿ ಯೋಜನೆ ಕುರಿತು ಏ.8ರಂದು ಬಹಿರಂಗವಾಗಿ ಚರ್ಚೆಗೆ ಬರುವಂತೆ ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಅವರು ಹಾಕಿರುವ ಸವಾಲು ಹಾಸ್ಯಾಸ್ಪದವಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ನಿಮಿತ್ತ ಭಗವತಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ವಿಧಾನಸಭೆ ಉಪಚುನಾವಣೆ ಪ್ರಚಾರ ಪ್ರಕ್ರಿಯೆ ಏ.7ರಂದು ಸಂಜೆ ಮುಗಿಯುತ್ತದೆ. 8ರಂದು ಸಭೆ ನಡೆಸಲು ಅವಕಾಶವೇ ಇಲ್ಲ ಎಂಬ ಸಾಮಾನ್ಯ ಜ್ಞಾನ ಕಾರಜೋಳ ಅವರಿಗೆ ಇಲ್ಲವೇ? ಕೇವಲ ಪ್ರಚಾರಕ್ಕಾಗಿ, ಉಡಾಫೆಗಾಗಿ ಇಂತಹ ಹೇಳಿಕೆ ನೀಡಿರುವ ಇವರು ಯುಕೆಪಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಏನೇ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕಾಂಗ್ರೆಸ್ ಅವಧಿಯಲ್ಲಿ ಮಾತ್ರ. ಬಿಜೆಪಿಯವರಿಗೆ ಮಾತನಾಡಲು ಯಾವ ವಿಷಯವೂ ಇಲ್ಲ. ಬೆಂಕಿ ಪೊಟ್ಟಣ ಕಿಸೆಯಲ್ಲಿ ಇಟ್ಟುಕೊಂಡು ಕಂಡ ಕಂಡಲ್ಲಿ ಜಾತಿ, ಮತ, ದ್ವೇಷದ ಮೂಲಕ ಬೆಂಕಿ ಹಚ್ಚುವ ಇವರು. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಪ್ರಚಾರಕ್ಕಾಗಿ ಭಾಷಣ ಮಾಡುವ ಇವರು. ಎಲ್ಲ ರಂಗಗಳಲ್ಲಿ ವಿಫಲರಾಗಿದ್ದಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದರು.

ಮೋದಿ ಅವರು ಅಧಿಕಾರಕ್ಕೆ ಬಂದು 12 ವರ್ಷವಾಯಿತು. 24 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ ತಿಳಿದುಕೊಳ್ಳಿ. ರೈತರ ಸಾಲಮನ್ನಾ ಮಾಡದೇ, ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿ ಈ ಧೋರಣೆ ಕಂಡ ಯುವಕರಿಗೆ ಈ ಭರವಸೆಗಳು ಭ್ರಮನಿರಸವಾಗಿದೆ ಎಂದರು.

ನಂತರ ಕಾಂಗ್ರೆಸ್ ಮುಖಂಡ ಗಿರೀಶ ನಾಡಗೌಡ ಕೆರಕಲಮಟ್ಟಿ ಮಾತನಾಡಿ, ಮೇಟಿ ಅವರು ಸರ್ವ ಜನಾಂಗದ ನಾಯಕರು. ಎಲ್ಲರೂ ಅವರ ಮನೆಗೆ ನೇರವಾಗಿ ಹೋಗಬಹುದು. ಸಾಮಾನ್ಯರು ಯಾರು ವೀರಣ್ಣ ಚರಂತಿಮಠರ ಮನೆಗೆ ಕಾಲಿಡಲು ಆಗುವುದಿಲ್ಲ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ವೇಳೆ ವೇದಿಕೆಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಬ್ದುಲ್‌ ಹಮೀದ್‌ ಮುಶ್ರಿಫ್, ಸುರೇಶ ಗೂಳಪ್ಪ ರಕರೆಡ್ಡಿ, ಕಲಬಸಪ್ಪ ಹಳ್ಳೂರ, ಸಿದ್ದಣ್ಣ ರಕರೆಡ್ಡಿ, ಶರಣಪ್ಪ ಗುಳೇದ, ವಕೀಲರಾದ ಬಿ.ಜಿ. ಪಾಟೀಲ, ಚನ್ನಪ್ಪ ಕಲ್ಲೋಳ, ಸಂಗಪ್ಪ ಪೈಲದ, ಆದರ್ಶ ಹೊಸಮನಿ, ಪ್ರಭು ಪಾಟೀಲ ಕಂದಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭಗವತಿ ಗ್ರಾಮದ ನಂತರ ಕಿರಸೂರ, ಮುಗಳೊಳ್ಳಿ , ಬೆಣ್ಣೂರ ಗ್ರಾಮಗಳಲ್ಲಿ ಸಚಿವ ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ತಿಕೋಟಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರು ದಾಶ್ಯಾಳ ಸೇರಿದಂತೆ ಹಲವು ಕಾಂಗ್ರೆಸ್ ಪದಾಧಿಕಾರಿಗಳು ಮನೆ ಮನೆಗೆ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ನಡೆಸಿದರು.

RELATED ARTICLES
- Advertisment -
Google search engine

Most Popular