Friday, April 10, 2026
Google search engine

Homeದೇಶವೃಂದಾವನದಲ್ಲಿ ಸ್ಟೀಮರ್ ಪಲ್ಟಿಯಾಗಿ 10 ಮಂದಿ ಸಾವು! ಹಲವರ ಸ್ಥಿತಿ ಗಂಭೀರ

ವೃಂದಾವನದಲ್ಲಿ ಸ್ಟೀಮರ್ ಪಲ್ಟಿಯಾಗಿ 10 ಮಂದಿ ಸಾವು! ಹಲವರ ಸ್ಥಿತಿ ಗಂಭೀರ

ಮಥುರಾ: ಪವಿತ್ರ ಕ್ಷೇತ್ರವಾದ ವೃಂದಾವನದಲ್ಲಿ ಇಂದು ಭೀಕರ ದೋಣಿ ಅಪಘಾತ ಸಂಭವಿಸಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಯಮುನಾ ನದಿಯ ಶೃಂಗಾರ್ ಘಾಟ್ ಬಳಿ ಪ್ರವಾಸಿಗರಿಂದ ತುಂಬಿದ್ದ ಸ್ಟೀಮರ್ ದೋಣಿಯೊಂದು ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ, 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಎದುರಾಗಿದೆ.

ಲಕ್ಷಾಂತರ ಭಕ್ತರು ಭೇಟಿ ನೀಡುವ ವೃಂದಾವನದ ಕೇಶಿ ಘಾಟ್ ಮತ್ತು ಶೃಂಗಾರ್ ಘಾಟ್ ನಡುವೆ ಈ ದುರಂತ ಸಂಭವಿಸಿದೆ. ಸುಮಾರು 25 ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಈ ಸ್ಟೀಮರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಯಮುನಾ ನದಿಯ ಮಧ್ಯಭಾಗದಲ್ಲಿ ಚಲಿಸುತ್ತಿದ್ದಾಗ ಸ್ಟೀಮರ್ ದಿಢೀರನೆ ಪಲ್ಟಿಯಾಗಿದೆ.

ಈ ದುರಂತಕ್ಕೆ ಪಾಂಟೂನ್ ಸೇತುವೆಯ ದುರಸ್ತಿ ಕಾರ್ಯವೇ ಪ್ರಮುಖ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಘಟನಾ ಸ್ಥಳದ ಸಮೀಪದಲ್ಲೇ ಸೇತುವೆಯ ರಿಪೇರಿ ನಡೆಯುತ್ತಿತ್ತು. ಈ ವೇಳೆ ನೀರಿನ ಹರಿವಿನಲ್ಲಾದ ವ್ಯತ್ಯಯ ಅಥವಾ ಸ್ಟೀಮರ್ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡಿರಬಹುದು ಎನ್ನಲಾಗಿದೆ. ಸ್ಟೀಮರ್ ವೇಗವಾಗಿ ಪಲ್ಟಿಯಾಗುತ್ತಿದ್ದಂತೆ ಜನರು ನೀರಿನಲ್ಲಿ ಮುಳುಗಿದ್ದಾರೆ. ಘಟನೆ ನಡೆದ ಕೂಡಲೇ ಅಲ್ಲಿದ್ದ ಇತರೆ ಪ್ರವಾಸಿಗರು ಸಂತ್ರಸ್ಥರನ್ನ ರಕ್ಷಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿವೆ.

ಇದುವರೆಗೆ ಸತತ 22 ಜನರನ್ನು ನೀರಿನಿಂದ ಹೊರತೆಗೆಯಲಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಾಪತ್ತೆಯಾದವರ ಪತ್ತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಸ್ಥಳೀಯ ಮುಳುಗು ತಜ್ಞರು (Divers) ಯಮುನಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮಥುರಾ ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿರುವ ಅವರು, ಮೃತರ ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular