Sunday, April 19, 2026
Google search engine

Homeಸ್ಥಳೀಯಏ. 30ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಬ್ರಹ್ಮ ರಥೋತ್ಸವ : ಭಕ್ತಾದಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಶಾಸಕ ಎ.ಆರ್. ಕೃಷ್ಣಮೂರ್ತಿ,...

ಏ. 30ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಬ್ರಹ್ಮ ರಥೋತ್ಸವ : ಭಕ್ತಾದಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ :  ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವವು ಏ. 30ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಬಿಳಿಗಿರಿರಂಗನ ಬೆಟ್ಟದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹ ಸಭಾಂಗಣದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮಾತನಾಡಿದರು.

ಬಿಳಿಗಿರಿರಂಗನಬೆಟ್ಟದ ರಥೋತ್ಸವ ಹಿನ್ನೆಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಭಕ್ತಾದಿಗಳಿಗೆ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ವಾಹನಗಳ ನಿಲುಗಡೆ, ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲಾ ಸಿದ್ದತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದರು.

ಅಧಿಕಾರಿಗಳಿಗೆ ನಿಗದಿಪಡಿಸಲಾಗಿರುವ ಜವಾಬ್ದಾರಿಗಳ ಸಂಬಂಧ ನಿರ್ದೇಶನ ನೀಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಲಿರುವುದರಿಂದ ಮುಂಚಿತವಾಗಿಯೇ ಜಾತ್ರಾ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೊಳವೆ ಬಾವಿಗಳನ್ನು ದುರಸ್ತಿ ಪಡಿಸಬೇಕು. ಕುಡಿಯಲು ಶುದ್ಧ ಕುಡಿಯುವ ನೀರು ಹಾಗೂ ಇನ್ನಿತರೆ ಬಳಕೆಗೆ ಪ್ರತ್ಯೇಕ ವಾಟರ್ ಟ್ಯಾಂಕ್‍ಗಳನ್ನು ಇರಿಸಿಕೊಳ್ಳಬೇಕು. ಎಲ್ಲಿಯೂ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಊಟದ (ಪ್ರಸಾದ) ವ್ಯವಸ್ಥೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಸಾದ ತಯಾರಿಕೆಗೆ ಅಗತ್ಯವಿರುವ ಸ್ಥಳಾವಕಾಶ, ಪೂರಕ ಸಿದ್ದತೆಗಳಿಗೆ ಅಧಿಕಾರಿಗಳು ಮುತುವರ್ಜಿಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ವಿವಿಧ ಭಾಗಗಳಿಂದ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಬರಲು ಸುಸಜ್ಜಿತ ಬಸ್ಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ನಿಯೋಜಿಸಬೇಕು. ಬಿಳಿಗಿರಿರಂಗನಬೆಟ್ಟದ ಬಸ್ ನಿಲ್ದಾಣದ ಸ್ಥಳದಲ್ಲಿ ಶಾಮಿಯಾನ ಹಾಕಿಸಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರನ್ನು ಸಹ ಬಸ್ ನಿಲ್ದಾಣದಲ್ಲಿ ಪೂರೈಸಬೇಕು. ಬಿಳಿಗಿರಿರಂಗನಬೆಟ್ಟದ ರಸ್ತೆಯ ಚೆಕ್‍ಪೋಸ್ಟ್ ನಿಂದ ದ್ವಿಚಕ್ರ ವಾಹನಗಳಿಗೆ ಈ ಹಿಂದಿನಂತೆಯೇ ಬೆಟ್ಟಕ್ಕೆ ತೆರಳಲು ನಿರ್ಬಂಧ ಹೇರಲಾಗುವುದರಿಂದ ಹೆಚ್ಚಿನ ಬಸ್ಸುಗಳನ್ನು ಅಗತ್ಯಕ್ಕನುಗುಣವಾಗಿ ತೆರಳುವಂತೆ ಮಾಡಬೇಕು ಎಂದರು.

ಬೆಟ್ಟದ ರಸ್ತೆಯ ಎಡ ಹಾಗೂ ಬಲಭಾಗದಲ್ಲಿ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದ್ದು, ಇದನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು. ಇದೇ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು ರಸ್ತೆ ಸರಿಪಡಿಸಲು ಶೀಘ್ರವೇ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಇಂಜಿನಿಯರ್‌ ಗಳಿಗೆ ಸೂಚಿಸುವಂತೆ ತಿಳಿಸಿದರು.

ರಥೋತ್ಸವ, ಜಾತ್ರಾ ಸಂದರ್ಭದಲ್ಲಿ ನಿರಂತರ ವಿದ್ಯುತ್ ಒದಗಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಬೇಕು. ಕುಡಿಯುವ ನೀರಿನ ಪರೀಕ್ಷೆ ಮಾಡಿಸಬೇಕು. ಅಗ್ನಿಶಾಮಕ ದಳ ಸಹ ನಿಯೋಜನೆಯಾಗಬೇಕು. ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಇತರೆ ಕಡೆಯಿಂದ ಪೌರಕಾರ್ಮಿಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಸ ವಿಲೇವಾರಿ ತ್ವರಿತವಾಗಿ ಆಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಸೂಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಉಪವಿಭಾಗಾಕಾರಿ ದಿನೇಶ್‍ಕುಮಾರ್ ಮೀನಾ, ತಹಶೀಲ್ದಾರ್ ನಯನಾ, ದೇವಾಲಯದ ಆಗಮಿಕರಾದ ಎಸ್. ನಾಗೇಂದ್ರ ಭಟ್, ಅರ್ಚಕರಾದ ಎ.ಎಸ್. ರವಿಕುಮಾರ್, ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜೆ. ಶ್ರೀನಿವಾಸ್, ಸಮಿತಿ ಸದಸ್ಯರು, ಇತರೆ ಮುಖಂಡರು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸಂತೋಷ್ ಇಮ್ಯಾನುವೆಲ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್. ಸುರೇಶ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular