ಬೆಂಗಳೂರು: ತಾನು ಜೆಡಿಎಸ್‌ಗೆ ಸೇರುತ್ತೇನೆ ಎಂಬ ಸುದ್ದಿಗಳನ್ನು ಸಚಿವ ಜಮೀರ್ ಅಹ್ಮದ್ ಖಡಕ್ ಆಗಿ ತಳ್ಳಿ ಹಾಕಿದ್ದು, ಇದು ಸಂಪೂರ್ಣ ಊಹಾಪೋಹ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಆರೋಪಗಳಿಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಯಾಕೆ ಜೆಡಿಎಸ್‌ಗೆ ಹೋಗಲಿ? ಕಾಂಗ್ರೆಸ್ ಪಕ್ಷ ನನಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ,” ಎಂದು ಅವರು ಹೇಳಿದರು. 2017ರಲ್ಲಿ ಕಾಂಗ್ರೆಸ್ ಸೇರಿದ್ದನ್ನು ನೆನಪಿಸಿಕೊಂಡ ಅವರು, 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿರೀಕ್ಷೆ ಇಲ್ಲದೆ ಮಂತ್ರಿಯಾಗುವ ಅವಕಾಶ ಸಿಕ್ಕಿತ್ತು ಎಂದು ತಿಳಿಸಿದರು. ಆ ಸಂದರ್ಭದಲ್ಲಿ ಐದು ಖಾತೆಗಳು ನೀಡಲಾಗಿದ್ದವು ಎಂದು ಹೇಳಿದರು.
ಇದೀಗ 2023ರಲ್ಲಿ ಕೂಡ ನಾಲ್ಕು ಪ್ರಮುಖ ಖಾತೆಗಳನ್ನು ಕಾಂಗ್ರೆಸ್ ನೀಡಿದೆ. “ಇಷ್ಟೊಂದು ಗೌರವ ನೀಡಿದ ಪಕ್ಷವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ,” ಎಂದು ಅವರು ಪುನರುಚ್ಚರಿಸಿದರು. ಜೆಡಿಎಸ್‌ನಲ್ಲಿ ಹಿಂದೆ ವಕ್ಫ್ ಖಾತೆ ಮಾತ್ರ ನೀಡಲಾಗಿತ್ತು ಎಂದು ಹೋಲಿಕೆ ಮಾಡಿದರು.
ಸಿದ್ದರಾಮಯ್ಯ ಕುರಿತು ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಜಮೀರ್, “ಅವರು ಈಗಲೂ ಶಕ್ತಿಶಾಲಿ ನಾಯಕ. ಅವಶ್ಯಕತೆ ಬಂದಾಗ ಮಾತನಾಡುತ್ತಾರೆ,” ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಸಿದ್ದರಾಮಯ್ಯ ಅವರಿಗೆ ಆಪ್ತರು ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಸಾಬೀತುಪಡಿಸಲಿ, ಇಲ್ಲವಾದರೆ ಈ ರೀತಿಯ ಆರೋಪಗಳಿಗೆ ಅರ್ಥವಿಲ್ಲ ಎಂದು ಜಮೀರ್ ಅಹ್ಮದ್ ತಿರುಗೇಟು ನೀಡಿದರು.



