Wednesday, April 22, 2026
Google search engine

Homeದೇಶಭಾಷಣ ನಿಲ್ಸಿ.. ಟ್ರಾಫಿಕ್ ಕ್ಲಿಯರ್ ಮಾಡಿ-ಸಚಿವರಿಗೆ ಮಹಿಳೆ ಆವಾಜ್

ಭಾಷಣ ನಿಲ್ಸಿ.. ಟ್ರಾಫಿಕ್ ಕ್ಲಿಯರ್ ಮಾಡಿ-ಸಚಿವರಿಗೆ ಮಹಿಳೆ ಆವಾಜ್

ಮುಂಬೈ: ನಡುರಸ್ತೆಯಲ್ಲಿ ಸಚಿವರೊಬ್ಬರ ಭಾಷಣಕ್ಕೆ ಮಹಿಳೆಯೊಬ್ಬರು ಅಡ್ಡಿಪಡಿಸಿ, ಜನಸಾಮಾನ್ಯರ ಪರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾಜಕಾರಣಿಗಳ ಕಾರ್ಯಕ್ರಮಗಳಿಂದಾಗಿ ಜನಸಮಾನ್ಯರಿಗೆ ಎದುರಾಗುವ ಟ್ರಾಫಿಕ್ ಸಮಸ್ಯೆ ವಿರುದ್ಧ ಮಹಿಳೆಯೊಬ್ಬರು ತೋರಿದ ಈ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈನ ವರ್ಲಿಯ ಜಾಂಬೋರಿ ಮೈದಾನದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಕೇಂದ್ರದಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ವಿರೋಧ ಪಕ್ಷಗಳ ವಿರುದ್ಧ ಸಾವಿರಾರು ಮಹಿಳೆಯರು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಐದು ಗಂಟೆಗೆ ಆರಂಭವಾಗಬೇಕಿದ್ದ ಈ ಕಾರ್ಯಕ್ರಮ ವಿಳಂಬವಾದ ಕಾರಣ, ಇಡೀ ವರ್ಲಿ ಭಾಗದ ರಸ್ತೆಗಳು ವಾಹನ ದಟ್ಟಣೆ ಉಂಟಾಗಿತ್ತು.

ಇದೇ ಟ್ರಾಫಿಕ್ ಕಿರಿಕಿರಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ತನ್ನ ಮಗುವನ್ನು ಶಾಲೆಯಿಂದ ಮನೆಗೆ ಕರೆತರಲು ಹೋಗುತ್ತಿದ್ದಾಗ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಯಿತು. ಇದರಿಂದ ಕೋಪಗೊಂಡ ಆಕೆ ಕಾರಿನಿಂದ ಕೆಳಗಿಳಿದು ನೇರವಾಗಿ ವೇದಿಕೆಯ ಹತ್ತಿರಕ್ಕೆ ನುಗ್ಗಿದರು. ಆ ಸಮಯದಲ್ಲಿ ಸಚಿವ ಗಿರೀಶ್ ಮಹಾಜನ್ ಅವರು ಮಹಿಳಾ ಮೀಸಲಾತಿ ಬಗ್ಗೆ ಗಂಭೀರವಾಗಿ ಭಾಷಣ ಮಾಡುತ್ತಿದ್ದರು. ಆದರೆ ಮಹಿಳೆ ಅವರ ಭಾಷಣದ ನಡುವೆಯೇ ಕಿರುಚಾಡಿ, ನಿಮ್ಮ ಈ ಭಾಷಣ ಮತ್ತು ಮೆರವಣಿಗೆಯಿಂದ ನಮಗೆ ತೊಂದರೆಯಾಗುತ್ತಿದೆ, ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸಚಿವರ ವಿರುದ್ದ ಕಿಡಿಕಾರಿದ್ದಾರೆ.

ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇಕೆ ಈ ರೀತಿ ಕಾರ್ಯಕ್ರಮ ಮಾಡುತ್ತೀರಿ ಎಂದು ಮಹಿಳೆ ಪ್ರಶ್ನಿಸಿದಾಗ ಸಚಿವರು ಪೇಚಿಗೆ ಸಿಲುಕಿದರು. ಸಚಿವರು ಮತ್ತು ಅವರ ಬೆಂಬಲಿಗರು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವರು ಮಾತ್ರ ರಸ್ತೆ ಕ್ಲಿಯರ್ ಆಗುವವರೆಗೂ ಶಾಂತರಾಗಲಿಲ್ಲ.

ಬಳಿಕ ಪೊಲೀಸರು ಮಧ್ಯಪ್ರವೇಶಿಸಲು ಬಂದಾಗ ಅವರ ಮೇಲೆಯೂ ಸಿಟ್ಟಾದ ಮಹಿಳೆ, ಹಿರಿಯ ಅಧಿಕಾರಿಗಳ ಜೊತೆ ಮಾತನಾಡಬೇಕೆಂದು ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಅವರನ್ನು ಸಮಾಧಾನಪಡಿಸಿ ಪಕ್ಕಕ್ಕೆ ಕರೆದೊಯ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular