ಕೆ.ಆರ್.ನಗರ : ಅಧಿಕಾರದಲ್ಲಿದ್ದ 15 ವರ್ಷಗಳ ಕಾಲ ಕುರುಬ ಸಮುದಾಯ ಮತ್ತು ಆ ಸಮಾಜದ ಜನರು ಹೆಚ್ಚು ವಾಸಿಸುವ ಗ್ರಾಮಗಳನ್ನು ಕಡೆಗಾಣಿಸಿ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಈಗ ಆ ಸಮಾಜದವರ ಮೇಲೆ ಹೆಚ್ಚು ವ್ಯಾಮೋಹ ಬಂದಿದೆ ಎಂದು ಶಾಸಕ ಡಿ.ರವಿಶಂಕರ್ ವ್ಯಂಗ್ಯವಾಡಿದರು.
ಸಾಲಿಗ್ರಾಮ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಕಳೆದ 10 ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದ ಮುಖಂಡರು ಮತ್ತು ಕಾರ್ಯಕರ್ತರ ಕಾಂಗ್ರೆಸ್ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುರುಬ ಸಮಾಜ ಹೆಚ್ಚಿರುವ ಕೆಂಚನಹಳ್ಳಿ, ಗಂಧನಹಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ನಿಮ್ಮಕೊಡುಗೆ ಏನು ಎಂದು ಪ್ರಶ್ನಿಸಿದರು.
ಕ್ಷುಲ್ಲಕ ಮತ್ತು ಸಣ್ಣ ಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ವೈಯುಕ್ತಿಕ ತೇಜೋವಧೆ ಮತ್ತು ಕೆಟ್ಟ ರಾಜಕಾರಣ ಮಾಡುವ ಮಾಜಿ ಸಚಿವರಿಗೆ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಶಾಸಕರು ನಾನು ಚುನಾವಣೆ ಸಮಯ ಹೊರತು ಪಡಿಸಿದರೆ ಆನಂತರ ಜಾತ್ಯಾತೀತ ಮತ್ತು ಪಕ್ಷಾತೀತ ರಾಜಕಾರಣ ಮಾಡುತ್ತಿದ್ದೇನೆ ಎಂದರು.
ಅಭಿವೃದ್ಧಿ ಕೆಲಸ ಮಾಡುವಾಗ ಕ್ಷೇತ್ರದ ಜನರ ಹಿತವನ್ನು ಪರಿಗಣನೆಗೆ ತೆಗೆದುಕೊಳ್ಳುವ ನಾನು ಯಾವುದೇ ತಾರತಮ್ಯ ಮಾಡದೆ ಜನ ಪರವಾದ ಕೆಲಸಗಳನ್ನು ಮಾಡುತ್ತಿದ್ದು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದೇನೆ ಎಂಬುದಕ್ಕೆ ಕ್ಷೇತ್ರದ ಮತದಾರ ಬಂಧುಗಳೆ ಉತ್ತರ ಕೊಡುತ್ತಿದ್ದಾರೆಂದು ತಿಳಿಸಿದರು.
ತಮಗೆ ದೊರೆತ ಅಧಿಕಾರವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕ್ಷೇತ್ರದ ಜನರನ್ನು ಸಮಾನತೆಯಿಂದ ಕಾಣದೆ ಕುರುಬ ಸಮಾಜದವರು ನನಗೆ ಹೆಚ್ಚು ಮತ ನೀಡಿಲ್ಲ ಎಂದು ಹೋದಡೆಯಲ್ಲೆಲ್ಲಾ ದ್ವೇಷದ ಮಾತುಗಳನ್ನಾಡುತ್ತಿದ್ದ ಸಾ.ರಾ.ಮಹೇಶ್ ಅವರಿಗೆ ಈಗ ಕುರುಬರ ಬಗ್ಗೆ ಧಿಡೀರ್ ಪ್ರೇಮ ಏಕೆ ಎಂದು ಕೇಳಿದರು.
ರಾಜಕೀಯವಾಗಿ ಬೆಳೆಸಿದವರನ್ನು ನೆನೆಯದಿದ್ದರೆ ಹಾಳಾಗುತ್ತಾರೆ ಎಂದು ಹೇಳಿದ್ದ ಜಿ.ಪಂ.ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಡಿ.ರವಿಶಂಕರ್ ಸುಳ್ಳು ಹೇಳುವುದು ಅವರಿವರನ್ನು ವಂಚಿಸುವುದು ಮತ್ತು ಕೆಟ್ಟ ರಾಜಕಾರಣ ಮಾಡುವುದು ನಮ್ಮಕುಟುಂಬದ ಜಾಯಮಾನವಲ್ಲ ಎಂದು ದಿಟ್ಟವಾಗಿ ನುಡಿದರು.
ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಸರ್ಕಾರದಿಂದ ಸಾವಿರಾರು ಕೋಟಿ ರೂ ಅನುದಾನ ತಂದು ಆಧ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಆ ಮೂಲಕ ನೂರಾರು ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಮುಂದೆಯೂ ಮತದಾರರ ನಂಬಿಕೆಗೆ ಅರ್ಹರಾಗಿ ಕೆಲಸ ಮಾಡಿ ಕೆ.ಆರ್. ನಗರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ಸಿ.ಪಿ.ರಮೇಶ್ ಕುಮಾರ್ ಮಾತನಾಡಿ ಶಾಸಕ ಡಿ.ರವಿಶಂಕರ್ ಅವರ ಅಭಿವೃದ್ಧಿ ಕೆಲಸಗಳು ಮತ್ತು ಜನಪ್ರಿಯತೆಯನ್ನು ಸಹಿಸದ ಸಾ.ರಾ.ಮಹೇಶ್ ಕಾಂಗ್ರೆಸ್ ಬೆಂಬಲಿಗರಾಗಿರುವ ಕುರುಬ ಸಮಾಜದವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಹೀನ ಸ್ಥಿತಿಗಿಳಿದು ಆನಂತರ ಮುಖಭಂಗ ಅನುಭವಿಸುತ್ತಿದ್ದಾರೆಂದು ಟೀಕಿಸಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶಾಸಕರನ್ನು ಹೊತ್ತೊಯ್ದಿ ದ್ದವರು ಈಗ ನಾಚಿಕೆಯಿಲ್ಲದೆ ಅವರ ಪೊಟೋ ಹಾಕಿಕೊಳ್ಳುತ್ತಿದ್ದಾರೆ ಎಂದು ಜರಿದರಲ್ಲದೆ ಈ ವಿಚಾರದಲ್ಲಿ ವೀರ ಶೈವ ಸಮಾಜದವರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರಲ್ಲದೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಶಾಸಕರು 40 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಪುರಸಭೆ ಮಾಜಿ ಸದಸ್ಯ ನಟರಾಜು, ಮುಖಂಡರಾದ ಮಹದೇವನಾಯಕ, ಸುಧಾಕರ್, ಎಂ.ಎಸ್. ಅನಂತ್, ದೆಗ್ಗನಹಳ್ಳಿ ಆನಂದ್, ಕೆ.ಎಚ್. ಬುಡಿಗೌಡ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.



