ಮೈಸೂರು: ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶ ವಾಪಸ್ ಹಾಗೂ ಪೋಕ್ಸೊ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವ ರಾಜ್ಯಕ್ಕೆ ಎರಡು ಕಪ್ಪುಚುಕ್ಕೆ ಪ್ರಕರಣಗಳು ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿ ಅಮಾನತು ವಾಪಸ್ ಹಾಗೂ ಯಡಿಯೂರಪ್ಪ ಅವರ ಅಭಿಮಾನೋತ್ಸವ ಸರಿಯಲ್ಲ. ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಈ ಹಿಂದೆ ಕೇರಳ ಬಸ್ನಲ್ಲಿ ಸಿಕ್ಕಿದ್ದ 2 ಕೋಟಿ ಹಣವನ್ನು ಕೊಂಡೊಯ್ದು ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಂತವರು ರಾಮಚಂದ್ರರಾವ್. ಅವರ ಸಾಕು ಮಗಳು ರನ್ಯಾರಾವ್ ಚಿನ್ನಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಸಹ ಕೇಳಿಬಂದಿತ್ತು. ನ್ಯಾಯ ಕೇಳಲು ಬಂದಿದ್ದ ಮಹಿಳೆಯ ಮೇಲೆ ರಾಮಚಂದ್ರ ರಾವ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ವಿಡಿಯೋ ನನ್ನದಲ್ಲ ಎಂದು ವಾದಿಸಿದ್ದರು. ಆ ನಂತರ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯಲ್ಲಿ ಆ ವಿಡಿಯೋ ರಾಮಚಂದ್ರರಾವ್ ಅವರದ್ದೇ ಎಂಬುದು ಸಾಬಿತಾದ ಕಾರಣ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಇದೀಗ ಏಕಾಏಕಿ ಅವರ ಮೇಲಿನ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ. ಗೃಹ ಇಲಾಖೆಯನ್ನು ಪರಮೇಶ್ವರ್ ನಡೆಸುತ್ತಿದ್ದಾರೋ ಅಥವಾ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದಾರಾ ಎಂಬ ಅನುಮಾನವಿದೆ. ರಾಮಚಂದ್ರ ರಾವ್ ಮೇಲಿನ ಅಮಾನತು ಆದೇಶ ಹಿಂಪಡೆಯಲು ದೊಡ್ಡ ಮಟ್ಟದ ಕಿಕ್ ಬ್ಯಾಕ್ ಪಡೆದಿರಬಹುದು. ರಾಜ್ಯದಲ್ಲಿ ಯಾವ ಸೀಮೆಯ ಅಧಿಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಮೇ 9ಕ್ಕೆ ಚಿತ್ರದುರ್ಗದಲ್ಲಿ ಆಯೋಜಿಸಿರುವ ಬಿಎಸ್ ವೈ ಅಭಿಮಾನೋತ್ಸವಕ್ಕೆ ಎಚ್ ವಿಶ್ವನಾಥ್ ಕಿಡಿ ಪೋಕ್ಸೋ ಕೇಸ್ ಪ್ರಕರಣದ ಆರೋಪಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ. ಇದು ಗಂಭೀರ ಪ್ರಕರಣವಾಗಿದೆ. ಆದರೂ ಇದೀಗ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಎರಡು ಪ್ರಕರಣಗಳು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ವಕೀಲ ಸಿದ್ದರಾಮಯ್ಯಗೆ ಇದೆಲ್ಲ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.



