ಮೈಸೂರು : ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯುವುದಿಲ್ಲ. ಶೇ.90 ರಷ್ಟು ಮರಗಳನ್ನು ಉಳಿಸಲು ಸಲಹೆ ಸೂಚನೆ ನೀಡಲಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು – ಬೆಂಗಳೂರು ಹೊರವರ್ತುಲ ರಸ್ತೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಯ ಪಾರ್ಕ್ ಬಳಿ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳೂಡನೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು, ರಸ್ತೆ ಒತ್ತಡ ಕಡಿಮೆ ಮಾಡಲು 700ಕೋಟಿ ರೂ. ಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ವಿವಿಧೆಡೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗೂ ಮುನ್ನ ಗಿಡ-ಮರಗಳ ರಕ್ಷಣೆಗೆ ಮುಂದಾಗಿದ್ದೇವೆ, ಈ ಮೇಲ್ಸೇತುವೆ ಯೋಜನೆಯಲ್ಲಿ ಎರಡು ಬದಿ 150ಕ್ಕೂ ಹೆಚ್ಚು ಮರಗಳು ಕಂಡುಬಂದಿದ್ದು, ಯಾವುದೇ ಕಾರಣಕ್ಕೂ ಈ ಮರಗಳನ್ನು ಕಡಿಯುವುದಿಲ್ಲ, ಪರಿಸರವಾದಿಗಳು ಆತಂಕಪಡುವ ಪ್ರಮೇಯವಿಲ್ಲ, ಪರಿಸರವನ್ನು ಉಳಿಸಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು, ಅರಣ್ಯ ಇಲಾಖೆ ಹಾಗೂ ರಾಷ್ಟೀಯ ರಸ್ತೆ ಅಭಿವೃದ್ಧಿ ಸಂಸ್ಥೆಯೇ ಪರಿಸರ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಅಧಿಕಾರಿಗಳು ಚರ್ಚೆ ನಡೆಸಿ ಕಾಮಗಾರಿ ಆರಂಭಿಸಲಿದ್ದಾರೆ. ನಿಯಮನುಸಾರ ರಸ್ತೆಯ ಎರಡು ಬದಿಯಲ್ಲಿರುವ ಮರಗಳನ್ನ ಅರಣ್ಯ ಇಲಾಖೆಯಿಂದ ಗುರುತಿಸುವ ಕಾರ್ಯ ಮಾಡಲಾಗಿದೆ ಅಷ್ಟೇ ಅವುಗಳನ್ನ ಸಂರಕ್ಷಿಸಲಾಗುವುದು ಎಂದರು. ಸ್ಥಳ ಪರಿಶೀಲನೆ ವೇಳೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ತನ್ವಿರ್ ಆಸೀಫ್, ಹೆಚ್ಚುವರಿ ಆಯುಕ್ತೆ ವೀಣಾ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಸೇರಿ ಮತ್ತಿತರರು ಹಾಜರಿದ್ದರು.



