ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು Art of Living Foundation ಸಂಸ್ಥೆಯ 45ನೇ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿಯವರ ಅವರ 70ನೇ ಜನ್ಮದಿನದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಯೋಜಕರ ಮಾಹಿತಿ ಪ್ರಕಾರ, 182ಕ್ಕೂ ಹೆಚ್ಚು ದೇಶಗಳಿಂದ ಜನರು ಆನ್‌ಲೈನ್ ಹಾಗೂ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಹೊಸದಾಗಿ ನಿರ್ಮಿಸಲಾದ ‘ಧ್ಯಾನ ಮಂದಿರ’ ಧ್ಯಾನ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಪರಿವರ್ತನೆಗೆ ಸಂಬಂಧಿಸಿದ ಹಲವು ಸೇವಾ ಕಾರ್ಯಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭದಲ್ಲಿ ಆಡಳಿತ, ಶಿಕ್ಷಣ, ವ್ಯವಹಾರ ಹಾಗೂ ನಾಗರಿಕ ಸಮಾಜಕ್ಕೆ ಸಂಬಂಧಿಸಿದ ಜಾಗತಿಕ ನಾಯಕತ್ವ ಸಂವಾದಗಳು ಮತ್ತು ನೀತಿ ಚರ್ಚೆಗಳು ನಡೆಯಲಿವೆ. ವಿವಿಧ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ವಿಶೇಷ ಸಾಂಸ್ಕೃತಿಕ ಉತ್ಸವಗಳೂ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿವೆ.
ಮೇ 13ರಂದು ರವಿಶಂಕರ ಗುರೂಜಿ ಅವರ ನೇತೃತ್ವದಲ್ಲಿ “ವಿಶ್ವ ಶಾಂತಿಗಾಗಿ ಜಾಗತಿಕ ಧ್ಯಾನ” ಕಾರ್ಯಕ್ರಮ ನಡೆಯಲಿದ್ದು, ವಿಶ್ವದಾದ್ಯಂತ ಜನರು ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತದ 450ಕ್ಕೂ ಹೆಚ್ಚು ಜಿಲ್ಲೆಗಳ ಮೌನ ಸಾಧಕರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮಗಳ ಜೊತೆಗೆ ಕೈದಿಗಳ ಕಲ್ಯಾಣ ಹಾಗೂ ಕಾರಾಗೃಹ ಸುಧಾರಣೆ ಕುರಿತ ಚರ್ಚೆಗಳೂ ನಡೆಯಲಿವೆ. ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ನಡೆಯುವ BIMSTEC ಯುವ ನಾಯಕತ್ವ ವಿನಿಮಯ ಕಾರ್ಯಕ್ರಮದಲ್ಲಿ ಸದಸ್ಯ ರಾಷ್ಟ್ರಗಳ ಯುವ ನಾಯಕರು ಪಾಲ್ಗೊಳ್ಳಲಿದ್ದಾರೆ.



