ಕೆ.ಆರ್.ನಗರ : ವೃದ್ದ ಮಹಿಳೆಯನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ತಿಪ್ಪೂರು ಗ್ರಾಮದ ಗೌರಮ್ಮ(90), ಎಂಬಾಕೆಯನ್ನು ಅದೇ ಗ್ರಾಮದ ವೀರಭದ್ರ ಎಂಬಾತ ಹತ್ತು ದಿನಗಳ ಹಿಂದೆ ಕೊಲೆ ಮಾಡಿ ಯಾರಿಗೂ ಅನುಮಾನ ಬಾರದ ಹಾಗೆ ಚೀಲದಲ್ಲಿ ಹಾಕಿ ಮುಚ್ಚಿಟ್ಟಿದ್ದ.
ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಸದಾನಂದ ಕೆ.ಆರ್.ನಗರ ಠಾಣೆಗೆ ಏಪ್ರಿಲ್ 30 ರಂದು ದೂರು ನೀಡಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದಾಗ ಗ್ರಾಮಸ್ಥರು ವೀರಭದ್ರನ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆತನನ್ನು ಶುಕ್ರವಾರ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಶವವನ್ನು ಮುಚ್ಚಿಟ್ಟಿದ್ದ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಲ್ಲಿಕ್, ಡಿವೈಎಸ್ ಪಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ಪಿಎಸ್ ಐ ಆರ್.ಸ್ವಾಮೀಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆನಂತರ ಶವವನ್ನು ವಶಕ್ಕೆ ಪಡೆದ ಪೊಲೀಸರು ಮೈಸೂರಿನ ಕೆ.ಆರ್.ಆಸ್ಪತ್ರೆ ರವಾನಿಸಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬೆಚ್ಚಿ ಬಿದ್ದ ಜನತೆ : ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಅರ್ಜುನ ಹಳ್ಳಿ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಇದರಿಂದ ಜನತೆ ಬೆಚ್ಚಿ ಬಿದ್ದಿದ್ದು ಕಾನೂನು ಸುವ್ಯವಸ್ಥೆಯನ್ನು ಬಲ ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.



