Monday, May 18, 2026
Google search engine

Homeಸ್ಥಳೀಯಮೈಸೂರು ಜಿಲ್ಲಾಡಳಿತದಿಂದ ಬಸ್ ಮುಷ್ಕರಕ್ಕೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ

ಮೈಸೂರು ಜಿಲ್ಲಾಡಳಿತದಿಂದ ಬಸ್ ಮುಷ್ಕರಕ್ಕೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ

ಮೈಸೂರು : ಕೆ.ಎಸ್.ಆರ್.ಟಿ.ಸಿ ನೌಕರರು ಮೇ 20 ರಿಂದ ಅನಿರ್ಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ  ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಖಾಸಗಿ ವಾಹನ ಮಾಲೀಕರ ಸಂಘ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಡಿಸಿ ಲಕ್ಷ್ಮೀಕಾಂತರೆಡ್ಡಿ, ಕೆ.ಎಸ್.ಆರ್.ಟಿ.ಸಿ ನಗರ ವಿಭಾಗದಲ್ಲಿ  534  ಬಸ್ ಗಳು ಕಾರ್ಯನಿರ್ವಹಿಸುತ್ತಿದ್ದು, 517 ಶೆಡ್ಯೂಲ್ ಗಳಿವೆ. ಗ್ರಾಮೀಣ ವಿಭಾಗದಲ್ಲಿ 720 ಬಸ್ ಗಳು ಕಾರ್ಯನಿರ್ವಹಿಸುತ್ತಿದ್ದು, 691 ಶೆಡ್ಯೂಲ್ ಗಳಿವೆ. ಕೆ.ಎಸ್.ಆರ್.ಟಿ.ಸಿ ನೌಕರರು ಮೇ 20 ರಂದು ಬಸ್ ಗಳನ್ನು ಚಾಲನೆ ಮಾಡದಿದ್ದಲ್ಲಿ‌, ರೂಟ್ ಮ್ಯಾಪ್ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಕೆ.ಎಸ್.ಆರ್.ಟಿ.ಸಿ, ಪ್ರಾದೇಶಿಕ‌ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಮಾಣಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೆ.ಎಸ್.ಆರ್.ಟಿ.ಸಿ ಸಬ್ ಅರ್ಬನ್  ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿ ಕಂಟ್ರೋಲ್ ರೂಂಗಳಲ್ಲಿ ಖಾಸಗಿ ಬಸ್ ,ಮಾಕ್ಸಿ ಕ್ಯಾಬ್, ಮಿನಿ‌ಬಸ್ ಗಳ  ಟ್ರಿಪ್ ಗಳ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ನೀಡಬೇಕು ಎಂದರು.

ಜಿಲ್ಲೆಯಲ್ಲಿರುವ ಖಾಸಗಿ ಬಸ್, ಮಿನಿ ಬಸ್ ಹಾಗೂ ಮ್ಯಾಕ್ಸಿ ಕ್ಯಾಬ್  ಗಳ ವಿವರವನ್ನು‌‌ ಪಡೆದುಕೊಂಡು‌ ಟ್ರಿಪ್ ಗಳ ವಿವರದೊಂದಿಗೆ ಪಟ್ಟಿಯನ್ನು ಸಿದ್ಧಪಡಿಸಿಕೊಂಡರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬಹುದು ಎಂದರು.

ಕಳೆದ ಬಾರಿ ಕೆ.ಎಸ್.ಆರ್.ಟಿ.ಸಿ ನೌಕರರು ಮುಷ್ಕರ ಕೈಗೊಂಡ ಸಂದರ್ಭದಲ್ಲಿ ಯಶಸ್ವಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸನ್ನಿವೇಶವನ್ನು ನಿಭಾಯಿಸಲಾಗಿತ್ತು, ಅದೇ ರೀತಿ ಈ ಬಾರಿಯು ಯೋಜ‌ನೆ ರೂಪಿಸಿಕೊಳ್ಳಿ ಎಂದರು.

ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರವನ್ನು ಮುಂದಿಟ್ಟುಕೊಂಡು ಖಾಸಗಿ ಬಸ್, ಮಿನಿ ಬಸ್  ಸಾರ್ವಜನಿಕರ ಬಳಿ ಹೆಚ್ಚುವರಿ ಶುಲ್ಕ ವಸೂಲಿ ಮಾಡದೇ ಈಗಾಗಲೇ ತಾವು ನಿಗದಿಪಡಿಸಿರುವ ರೀತಿ ದರವನ್ನು ಪಡೆದುಕೊಳ್ಳಿ  ಎಂದರು

ಸಬ್ ಅರ್ಬನ್ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ತಾಲ್ಲೂಕು  ಸೇರಿದಂತೆ ಇತರೆ ಬಸ್ ನಿಲ್ದಾಣಗಳಲ್ಲಿ  ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ  ಬಂದೋಬಸ್ಥ್ ಗೆ ಸಿದ್ಧತೆ ಮಾಡಿಕೊಳ್ಳುವುದು. ಮುಷ್ಕರದ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಅಹಿತಕರ ಘಟನೆ ಸಂಭವಿಸುವ ರೀತಿ ಸನ್ನಿವೇಶ ಸೃಷ್ಠಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ‌ಬಾಲದಂಡಿ, ಡಿ.ಸಿ.ಪಿ‌ಸುಂದರ್ ರಾಜ್, ಪ್ರಾದೇಶಿಕ ಸಾರಿಗೆ ಆಯುಕ್ತರಾದ ಚೌಹಾನ್, ನಗರ ಕೆ.ಎಸ್.ಆರ್ ಟಿ.ಸಿ  ವಿಭಾಗೀಯ  ನಿಯಂತ್ರಣಾಧಿಕಾರಿ  ಮಾಧುರಿ,  ಖಾಸಗಿ ವಾಹನಗಳ ಸಂಘದ ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular