ಓಸ್ಲೋ : ಭಾರತ ಮತ್ತು ನಾರ್ವೆ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾರ್ವೆ ದೇಶದ ಅತ್ಯುನ್ನತ ಗೌರವವಾದ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್’ (Grand Cross of the Royal Norwegian Order of Merit) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸೋಮವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಾರ್ವೆ ಸರ್ಕಾರವು ತನ್ನ ದೇಶದ ಅತ್ಯಂತ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಈ ಗೌರವವನ್ನು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿತು. ಇದರೊಂದಿಗೆ ಪ್ರಧಾನಿ ಮೋದಿಯವರು ಪಡೆದ ಒಟ್ಟು ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸಂಖ್ಯೆ 32ಕ್ಕೆ ಏರಿದೆ. ವಿಶೇಷವೆಂದರೆ, ಇದಕ್ಕೂ ಒಂದು ದಿನ ಮುಂಚಿತವಾಗಿ ಪ್ರಧಾನಿಯವರಿಗೆ ಸ್ವೀಡನ್ ದೇಶದ ಅತ್ಯುನ್ನತ ಗೌರವವಾದ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್’ (ಕಮಾಂಡರ್ ಗ್ರಾಂಡ್ ಕ್ರಾಸ್) ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ನಾರ್ವೆ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಾರ್ವೆ ಪ್ರಧಾನಿ ಯೋನಸ್ ಗೌರ್ ಸ್ಟೋರಾ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ಹಸಿರು ಇಂಧನ (Green Energy) ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಸಭೆಯ ನಂತರ ಎರಡೂ ದೇಶಗಳ ನಡುವೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳಿಗೆ (MoU) ಸಹಿ ಹಾಕಲಾಯಿತು. ಒಪ್ಪಂದಗಳ ನಂತರ ಜಂಟಿ ಮಾಧ್ಯಮ ಪ್ರಕಟಣೆ ನೀಡಿದ ಪ್ರಧಾನಿ ಮೋದಿ, “ಭಾರತ ಮತ್ತು ನಾರ್ವೆ ನಡುವಿನ ಈ ಒಪ್ಪಂದಗಳು ಉಭಯ ದೇಶಗಳಿಗೆ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಪ್ರಯೋಜನಕಾರಿಯಾಗಲಿವೆ” ಎಂದರು.
ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ
ಓಸ್ಲೋ ತಲುಪಿದ ಪ್ರಧಾನಿ ಮೋದಿಯವರನ್ನು ಅಲ್ಲಿನ ಭಾರತೀಯ ವಲಸಿಗರು ಅತ್ಯಂತ ಸಡಗರ ಮತ್ತು ಭಕ್ತಿ-ಭಾವದಿಂದ ಸ್ವಾಗತಿಸಿದರು. ಈ ಅದ್ಭುತ ಸ್ವಾಗತದ ಬಗ್ಗೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
“ಓಸ್ಲೋದಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ‘ರಿದಮ್ಸ್ ಆಫ್ ಇಂಡಿಯಾ’ ಕಾರ್ಯಕ್ರಮವು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿತು. ಸತ್ರಿಯಾದಿಂದ ಭರತನಾಟ್ಯ, ಕುಚಿಪುಡಿಯಿಂದ ಒಡಿಸ್ಸಿ, ಕಥಕ್‌ನಿಂದ ಮೋಹಿನಿಯಾಟ್ಟಂವರೆಗೆ ಪ್ರತಿಯೊಂದು ನೃತ್ಯ ಶೈಲಿಯಲ್ಲೂ ವರ್ಷಗಳ ಶ್ರಮ, ಶಿಸ್ತು ಮತ್ತು ಉತ್ಕೃಷ್ಟತೆ ಎದ್ದು ಕಾಣುತ್ತಿತ್ತು. ಭಾರತದ ಸಂಸ್ಕೃತಿಯನ್ನು ವಿದೇಶದಲ್ಲೂ ಜೀವಂತವಾಗಿಟ್ಟಿರುವ ಅನಿವಾಸಿ ಭಾರತೀಯರ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ” ಎಂದು ಮೋದಿ ಬರೆದುಕೊಂಡಿದ್ದಾರೆ.
ಸಾಂಸ್ಕೃತಿಕ ರಂಗು : ಹೆಣ್ಣುಮಕ್ಕಳ ಶಾಸ್ತ್ರೀಯ ನೃತ್ಯ
ಓಸ್ಲೋದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ‘ನಾಟ್ಯಾಲಯ ನೃತ್ಯ ಶಾಲೆ’ಯ ಹೆಣ್ಣುಮಕ್ಕಳ ತಂಡವು ಅದ್ಭುತವಾದ ಭರತನಾಟ್ಯದ ‘ಅಲಾರಿಪ್ಪು’ ನೃತ್ಯವನ್ನು ಪ್ರಸ್ತುತಪಡಿಸಿತು. ಈ ಕುರಿತು ಶ್ಲಾಘಿಸಿದ ಪ್ರಧಾನಿ, ಈ ನೃತ್ಯ ಸಂಸ್ಥೆಯು ಕಳೆದ ಮೂರು ದಶಕಗಳಿಂದ ನಾರ್ವೆಯಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುವಲ್ಲಿ ಶ್ರಮಿಸುತ್ತಿದೆ ಮತ್ತು ಇಂತಹ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ.
ಭಾರತೀಯ-ಪಾಶ್ಚಾತ್ಯ ಸಂಗೀತದ ಸಮ್ಮಿಲನ
ಪ್ರಧಾನಿಯವರ ಸ್ವಾಗತ ಕೋರಲು ಭಾರತೀಯ ಮತ್ತು ವಿದೇಶಿ ಕಲಾವಿದರನ್ನೊಳಗೊಂಡ ಜಂಟಿ ತಂಡವೊಂದು ಭಕ್ತಿಯಿಂದ ‘ಆರತಿ ಓಂ ಜೈ ಜಗದೀಶ್ ಹರೇ’ ಗೀತೆಯನ್ನು ಹಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದನ್ನು “ಸಂಗೀತ, ಸಂಸ್ಕೃತಿ ಮತ್ತು ಹಂಚಿಕೆಯ ಕಲಾತ್ಮಕ ಭಾವನೆಗಳ ಮೂಲಕ ಒಗ್ಗಟ್ಟಿನ ಸುಂದರ ಪ್ರತಿಬಿಂಬ” ಎಂದು ಪ್ರಧಾನಿ ಬಣ್ಣಿಸಿದರು. ಈ ಅದ್ಭುತ ಪ್ರದರ್ಶನ ನೀಡಿದ ಬ್ಯಾರೆಟ್ ಡ್ಯೂ ಮ್ಯೂಸಿಕ್ ಇನ್‌ಸ್ಟಿಟ್ಯೂಟ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಭಾರತೀಯ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗಳ ಈ ಸಮ್ಮಿಲನವು ಅತ್ಯಂತ ಭಾವಪೂರ್ಣವಾಗಿತ್ತು ಎಂದರು.
ಇದಕ್ಕೂ ಮುನ್ನ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಓಸ್ಲೋ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ನಾರ್ವೆ ಪ್ರಧಾನಿ ಯೋನಸ್ ಗೌರ್ ಸ್ಟೋರಾ ಅವರೇ ಖುದ್ದಾಗಿ ಆಗಮಿಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದರು.



