Friday, July 3, 2026
Google search engine

Homeದೇಶಜಿಬಿಎ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ : ಕೇಂದ್ರ ಚುನಾವಣಾ ಆಯೋಗದ ತುರ್ತು ಮಧ್ಯಪ್ರವೇಶಕ್ಕೆ ಶೋಭಾ...

ಜಿಬಿಎ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ : ಕೇಂದ್ರ ಚುನಾವಣಾ ಆಯೋಗದ ತುರ್ತು ಮಧ್ಯಪ್ರವೇಶಕ್ಕೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಪ್ರತ್ಯೇಕ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗ (ECI) ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಬಾರಿ ಪತ್ರ ಬರೆದು ತಮ್ಮ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಬೆಂಗಳೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೇಳಾಪಟ್ಟಿ ಹಾಗೂ ವಿಭಿನ್ನ ಕಟ್-ಆಫ್ ದಿನಾಂಕಗಳನ್ನು ನಿಗದಿಪಡಿಸಿ, ಮತ್ತೊಂದು ಸಮಾನಾಂತರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಧಿಕಾರಿಗಳಲ್ಲಿ ಗೊಂದಲ ಮೂಡಿಸುವುದಲ್ಲದೆ, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

‘EROಗಳು ಮಾತ್ರ ಈ ಕಾರ್ಯ ನಿರ್ವಹಿಸಬೇಕು’

ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ತಯಾರಿ, ಪರಿಷ್ಕರಣೆ, ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಗಳು ಜನಪ್ರತಿನಿಧಿತ್ವ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ ನಡೆಯುತ್ತವೆ.

ಈ ಕಾನೂನುಬದ್ಧ ಕರ್ತವ್ಯಗಳನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡುವ ಚುನಾವಣಾ ನೋಂದಣಾಧಿಕಾರಿಗಳು (ERO) ಮಾತ್ರ ನಿರ್ವಹಿಸಬೇಕು.

ಭಾರತ ಚುನಾವಣಾ ಆಯೋಗ ಸಿದ್ಧಪಡಿಸುವ ಪಟ್ಟಿಯೇ ಅಧಿಕೃತವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗವು ಅದನ್ನೇ ಅಳವಡಿಸಿಕೊಳ್ಳಬೇಕಾಗುತ್ತದೆ.

ಸಂವಿಧಾನ ವಿರೋಧಿ ಮತ್ತು ಗೊಂದಲದ ನಡೆ

"ಸಂವಿಧಾನದ ಅನುಚ್ಛೇದ 243K ಮತ್ತು 243ZA ಅಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಜವಾಬ್ದಾರಿ ಇದೆಯೇ ಹೊರತು, ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಅಥವಾ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಸ್ವತಂತ್ರ ಅಧಿಕಾರವಿಲ್ಲ. ಈ ಸಂಪೂರ್ಣ ಅಧಿಕಾರ ಭಾರತ ಚುನಾವಣಾ ಆಯೋಗಕ್ಕೆ ಮಾತ್ರ ಸೇರಿದ್ದಾಗಿದೆ." - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ರಾಜ್ಯ ಚುನಾವಣಾ ಆಯೋಗದ ಈ ಸಮಾನಾಂತರ ನಡೆ ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ. ಇದರಿಂದ ಅನಗತ್ಯ ಕೆಲಸದ ಪುನರಾವರ್ತನೆ, ಸಾರ್ವಜನಿಕ ಹಣದ ವ್ಯರ್ಥ ವೆಚ್ಚ ಹಾಗೂ ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗಲಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಯಮ ಬಾಹಿರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರ!

ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಭೌತಿಕ ಪರಿಶೀಲನೆ ನಡೆಸಬೇಕು. ಆದರೆ, ಪ್ರಸ್ತುತ ರಾಜ್ಯದ ಹಲವೆಡೆ ನಿಯಮಗಳನ್ನು ಗಾಳಿಗೆ ತೂರಿ ಸಮುದಾಯ ಭವನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪರಿಷ್ಕರಣೆ ನಡೆಸಲಾಗುತ್ತಿದೆ. ಈ ಕ್ರಮವು ವಿಶೇಷ ಪರಿಷ್ಕರಣೆಯ ಮೂಲ ಉದ್ದೇಶವನ್ನೇ ಹಾಳುಗೆಡವುತ್ತದೆ ಮತ್ತು ಅಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಶೋಭಾ ದೂರಿದ್ದಾರೆ.

ಅಕ್ರಮ ವಲಸಿಗರ ಸೇರ್ಪಡೆ ಆತಂಕ

ರಾಜ್ಯ ಸರ್ಕಾರವು ರಾಜಕೀಯ ಲಾಭಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮನೆ-ಮನೆ ಪರಿಶೀಲನೆ ಕೈಬಿಟ್ಟಿರುವುದರಿಂದ, ಮತದಾರರಾಗಲು ಅರ್ಹರಲ್ಲದ ವ್ಯಕ್ತಿಗಳು, ಅಕ್ರಮ ವಲಸಿಗರು ಹಾಗೂ ಅನರ್ಹರ ಹೆಸರುಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಗಂಭೀರ ಅಪಾಯವಿದೆ. ಆದ್ದರಿಂದ ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಇದರಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular