ಬೆಂಗಳೂರು: ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ರಾಜ್ಯ ಸಾರಿಗೆ ನೌಕರರ ಸಂಘಗಳಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ಮನ್ಮಧ ರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದರು.
ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದವು. 2026ರ ಏಪ್ರಿಲ್ 29ರಂದು ನೀಡಿದ್ದ ಮುಷ್ಕರ ನೋಟಿಸ್ ಅನ್ವಯ ಯಾವುದೇ ಮುಷ್ಕರ ನಡೆಸಬಾರದು ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ಜೊತೆಗೆ, ಸಂಘಗಳ ಬೇಡಿಕೆಗಳ ಕುರಿತು ಚರ್ಚಿಸಲು ಸರ್ಕಾರ ಮಾತುಕತೆ ದಿನಾಂಕ ನಿಗದಿ ಮಾಡಬೇಕೆಂದು ನಿರ್ದೇಶಿಸಿದೆ.
ಈ ಪ್ರಕರಣದ ಮುಂದಿನ ವಿಚಾರಣೆ ಮೇ 21ರಂದು ನಡೆಯಲಿದೆ. ಸಂಘದ ಪ್ರತಿನಿಧಿಗಳು, ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳ ಸಭೆ ಕುರಿತ ಮಾಹಿತಿ ಪಡೆಯಲು ಹೆಚ್ಚುವರಿ ಸಮಯ ಅಗತ್ಯವಿದೆ ಎಂದು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.
ಬಸ್ ಮುಷ್ಕರದಿಂದ ದಿನಗೂಲಿ ಕಾರ್ಮಿಕರು, ರೋಗಿಗಳು, ವೃದ್ಧರು, ಅಂಗವಿಕಲರು ಹಾಗೂ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತ ಜನರಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಗೃಹಕಾರ್ಮಿಕ ಮಹಿಳೆ ಮತ್ತು ಕಟ್ಟಡ ಕಾರ್ಮಿಕನೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದರು.
ಇದೇ ವೇಳೆ, ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳ ಮೇಲೂ ಮುಷ್ಕರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿತ್ತು. ಮೇ 18ರಿಂದ ಆರಂಭವಾಗಿರುವ ಪರೀಕ್ಷೆಗಳು ಮೇ 25ರವರೆಗೆ ನಡೆಯಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳನ್ನು ಜೂನ್ 30ರವರೆಗೆ “ಸಾರ್ವಜನಿಕ ಉಪಯೋಗ ಸೇವೆಗಳು” ಎಂದು ಘೋಷಿಸಿತ್ತು. ಈ ಅವಧಿಯಲ್ಲಿ ಮುಷ್ಕರ ನಡೆಸಲು ಅವಕಾಶವಿಲ್ಲ ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದರು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರನಾಥ ಪೂಜಾರಿ ಹಾಜರಿದ್ದರು. ಸಾರಿಗೆ ನಿಗಮಗಳ ಪರ ವಕೀಲ ಹೆಚ್.ಆರ್. ರೇಣುಕ ಹಾಗೂ ಜಂಟಿ ಕ್ರಿಯಾ ಸಮಿತಿಯ ಪರ ಲಿಪ್ಟಾನ್ ರೊಸರಿಯೊ ಮತ್ತು ಕ್ಲಿಫ್ಟಾನ್ ರೊಸರಿಯೊ ವಾದ ಮಂಡಿಸಿದರು.



