ತುಮಕೂರು : ತುಮಕೂರು ಮತ್ತು ಬೆಂಗಳೂರು ನಡುವೆ ಪ್ರತಿನಿತ್ಯ ಸಂಚರಿಸಲಿರುವ 10 ನೂತನ ಏಸಿ ಬಸ್ಗಳ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಕೆ.ಜೆ.ಜಾರ್ಜ್, ಕೆಎಸ್ಆರ್ಟಿಸಿ ನಿಗಮ ಮಂಡಳಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ತುಮಕೂರು-ಬೆಂಗಳೂರು ಮಾರ್ಗದಲ್ಲಿ ಪ್ರತಿದಿನ ಸಾವಿರಾರು ಜನ ಸಂಚರಿಸುವ ಹಿನ್ನೆಲೆ, ಹೆಚ್ಚು ಆರಾಮದಾಯಕ ಮತ್ತು ವೇಗವಾದ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಹೊಸ ಬಸ್ ಸೇವೆ ಆರಂಭಿಸಲಾಗಿದ್ದು, ಉದ್ಯೋಗ, ಶಿಕ್ಷಣ, ವ್ಯಾಪಾರ ಮತ್ತು ಚಿಕಿತ್ಸೆಗೆ ಪ್ರತಿದಿನ ಬೆಂಗಳೂರಿಗೆ ತೆರಳುವ ಜನರಿಗೆ ಈ ಸೇವೆ ಅನುಕೂಲಕರವಾಗಲಿದೆ ಎಂದು ಹೇಳಲಾಗಿದೆ.
ಈ ವೇಳೆ ಮಾತನಾಡಿದ ನಿಖಿತ್ ರಾಜ್ ಮೌರ್ಯ, ನಾನು ಹುಟ್ಟಿದ ಊರಿನ ಜನರಿಗೆ ನನ್ನ ಕೈಲಾದ ಪುಟ್ಟ ಸೇವೆಯನ್ನು ಒದಗಿಸಿದ ತೃಪ್ತಿಯ ಭಾವ ನನ್ನದು. ತುಮಕೂರು-ಬೆಂಗಳೂರು ನಡುವೆ ನಿತ್ಯ ಸಂಚರಿಸುವ ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.



