Wednesday, May 20, 2026
Google search engine

HomeಅಪರಾಧಕಾನೂನುGBA ಚುನಾವಣೆ: ಆಗಸ್ಟ್ 31ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ

GBA ಚುನಾವಣೆ: ಆಗಸ್ಟ್ 31ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ

ಬೆಂಗಳೂರು: ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31, 2026ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೊಯ್ಮಲ್ಯ ಬಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠವು ಈ ಆದೇಶ ನೀಡಿತು.

ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಎ ಎಂ ಸಿಂಗ್ವಿ ಮಂಡಿಸಿದ ವಾದವನ್ನು ಆಲಿಸಿದ ಬಳಿಕ, ಈ ಹಿಂದೆ ನಿಗದಿಪಡಿಸಿದ್ದ ಜೂನ್ 30ರ ಗಡುವನ್ನು ನ್ಯಾಯಾಲಯ ಆಗಸ್ಟ್ 31ರವರೆಗೆ ವಿಸ್ತರಿಸಿತು. ಜನಗಣತಿ ಕಾರ್ಯ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಂತಹ ಪ್ರಮುಖ ಕಾರ್ಯಗಳಲ್ಲಿ ರಾಜ್ಯದ ಸಿಬ್ಬಂದಿ ತೊಡಗಿಸಿಕೊಂಡಿರುವುದರಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ ಸಮಯ ಅಗತ್ಯವಾಗಿದೆ ಎಂದು ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಮನವಿ ಸಲ್ಲಿಸಿದ್ದವು.

ಈ ಹಿನ್ನೆಲೆಯಲ್ಲಿ, ಜೂನ್ 30ರೊಳಗೆ ಚುನಾವಣೆಯನ್ನು ಪೂರ್ಣಗೊಳಿಸಬೇಕೆಂಬ ಜನವರಿ 12ರ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಸಿಂಗ್ವಿ ಅವರು, SIR ಪ್ರಕ್ರಿಯೆ ಹಿನ್ನೆಲೆಯಲ್ಲಿ ಸಿಬ್ಬಂದಿ ನಿಯೋಜನೆಗೆ ತೊಂದರೆ ಎದುರಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ಕೆ ಪರಮೇಶ್ವರ, ಹಿಂದಿನ ಅವಧಿ ವಿಸ್ತರಣೆ ವೇಳೆ ಜೂನ್ 30, 2026ರೊಳಗೆ ಚುನಾವಣೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು ಎಂದು ವಾದಿಸಿದರು. ಆದಾಗ್ಯೂ, ಪರಿಸ್ಥಿತಿಯನ್ನು ಪರಿಗಣಿಸಿದ ಪೀಠವು ಕೊನೆಯ ಅವಕಾಶವಾಗಿ ಅವಧಿ ವಿಸ್ತರಣೆ ನೀಡಿದೆ.

ಜನವರಿ 12ರಂದು ಸುಪ್ರೀಂ ಕೋರ್ಟ್, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅವಧಿ 2020ರ ಸೆಪ್ಟೆಂಬರ್ 10ರಂದು ಅಂತ್ಯಗೊಂಡಿದ್ದರೂ, ಚುನಾವಣೆಗಳು ಇನ್ನೂ ನಡೆದಿಲ್ಲ.

ರಾಜ್ಯ ಚುನಾವಣಾ ಆಯೋಗ ತನ್ನ ಅರ್ಜಿಯಲ್ಲಿ, ಜನಗಣತಿ ಹಾಗೂ SIR ಕಾರ್ಯಗಳ ಕಾರಣ ಅಧಿಕಾರಿಗಳ ಸಮಯ ಮತ್ತು ಸಂಪನ್ಮೂಲಗಳು ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಂಡಿವೆ ಎಂದು ತಿಳಿಸಿದೆ. ರಾಜ್ಯ ಸರ್ಕಾರವೂ, ಹಣಕಾಸಿನ ಕೊರತೆಯಿಂದಲ್ಲದೆ ಆಡಳಿತಾತ್ಮಕ ಕಾರಣಗಳಿಂದ ಅವಧಿ ವಿಸ್ತರಣೆ ಕೋರಿರುವುದಾಗಿ ಸ್ಪಷ್ಟಪಡಿಸಿದೆ. ಚುನಾವಣೆಗೆ ಅಗತ್ಯ ನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಸೇರಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular