Friday, May 22, 2026
Google search engine

Homeರಾಜ್ಯಅರಣ್ಯ ಭೂಮಿ ಒತ್ತುವರಿಗೆ ಬ್ರೇಕ್ : ತಕ್ಷಣ ತೆರವುಗೊಳಿಸಿ ಬೇಲಿ ಹಾಕಲು ಖಂಡ್ರೆ ಸೂಚನೆ

ಅರಣ್ಯ ಭೂಮಿ ಒತ್ತುವರಿಗೆ ಬ್ರೇಕ್ : ತಕ್ಷಣ ತೆರವುಗೊಳಿಸಿ ಬೇಲಿ ಹಾಕಲು ಖಂಡ್ರೆ ಸೂಚನೆ

ಬೆಂಗಳೂರು : ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅರಣ್ಯ ಭೂಮಿ ಒತ್ತುವರಿ ತಡೆಯಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಭೂಮಿಗಳ ಮೇಲಿನ ಅಕ್ರಮ ಒತ್ತುವರಿಗಳನ್ನು ತಕ್ಷಣ ತೆರವುಗೊಳಿಸಿ, ಆ ಪ್ರದೇಶಗಳಿಗೆ ಭದ್ರ ಬೇಲಿ ಹಾಕಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಅರಣ್ಯ ಸಂರಕ್ಷಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಮಡೆನೂರು ಅರಣ್ಯ ಪ್ರದೇಶದ ಉದಾಹರಣೆ ಉಲ್ಲೇಖಿಸಿದ ಅವರು, ಭೂಮಿ ಅಧಿಕೃತವಾಗಿ ಅರಣ್ಯ ಇಲಾಖೆಯ ಹೆಸರಿನಲ್ಲಿದ್ದರೂ ಅಲ್ಲಿ ಅರಣ್ಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಭೂ ಮಾಫಿಯಾ ಒತ್ತುವರಿಗೆ ಅವಕಾಶ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳ ಸುತ್ತಮುತ್ತಲಿನ ಅರಣ್ಯ ಭೂಮಿಗಳನ್ನು ತಕ್ಷಣ ಗುರುತಿಸಿ, ಅಕ್ರಮ ಒತ್ತುವರಿ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇನ್ನು ಒತ್ತುವರಿ ತೆರವುಗೊಳಿಸಿದ ಬಳಿಕ ಜಾಗವನ್ನು ಖಾಲಿ ಬಿಡದೆ, ಇಲಾಖೆಯ ಅನುದಾನ ಬಳಸಿ ಭದ್ರ ಬೇಲಿ ನಿರ್ಮಿಸಿ, ಸ್ಥಳೀಯ ಮಣ್ಣಿಗೆ ಹೊಂದುವ ಸಸಿಗಳನ್ನು ನೆಟ್ಟು ನೆಡುತೋಪುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರಲ್ಲದೆ, ನಗರ ಪ್ರದೇಶಗಳ ಸುತ್ತ ಹಸಿರು ವಲಯವನ್ನು ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿದ್ದು, ಈ ಕಾರ್ಯದಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಸಚಿವರ ಈ ಕಠಿಣ ನಿರ್ದೇಶನದ ಹಿನ್ನೆಲೆ ಅರಣ್ಯ ಭೂಮಿ ಒತ್ತುವರಿ ನಡೆಸಿದವರಲ್ಲಿ ಆತಂಕ ಹೆಚ್ಚಾಗಿದೆ.

RELATED ARTICLES
- Advertisment -
Google search engine

Most Popular