ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಮತ್ತು ಬಿರುಗಾಳಿಯಿಂದ ಅಪಾರ ಪ್ರಮಾಣದ ಅಡಿಕೆ ಮರಗಳು ಧರೆಗುರುಳಿದ್ದು, ಸಂಕಷ್ಟಕ್ಕೊಳಗಾದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು, ಸೊರಬ ಹಾಗೂ ಶಿವಮೊಗ್ಗ ತಾಲ್ಲೂಕು ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಡಿಕೆ ತೋಟಗಳಿಗೆ ಭಾರೀ ಹಾನಿಯಾಗಿದೆ ಎಂದು ಹೇಳಿದ ಅವರು, ಈ ಪ್ರಕೃತಿ ವಿಕೋಪದಿಂದ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ಉಂಟಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಅಡಿಯಲ್ಲಿ ದೊರೆಯುವ ಪರಿಹಾರದಿಂದ ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಕುರಿತು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಇನ್ನು ರೈತರು ತಮ್ಮ ಮಕ್ಕಳಂತೆ ಸಾಕಿದ್ದ ಅಡಿಕೆ ಮರಗಳು ಬೇರು ಸಮೇತ ಉರುಳಿ ಬಿದ್ದಿವೆ. ಹಾನಿಯ ಪ್ರಮಾಣ ಗಂಭೀರವಾಗಿದ್ದು, ಜಿಲ್ಲಾಡಳಿತದಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನೊಂದೆಡೆ, ಮಳೆ-ಗಾಳಿಯಿಂದ ಹಾನಿಗೊಳಗಾದ ಪ್ರತಿಯೊಂದು ಅಡಿಕೆ ಮರಕ್ಕೂ ₹5,000 ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತ್ರೈಮಾಸಿಕ ಕೆಡಿಪಿ ಸಭೆಗೆ ಆಗಮಿಸಿದ್ದ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಲು ಪ್ರತಿಭಟನಾಕಾರರು ಯತ್ನಿಸಿದ ವೇಳೆ ಪೊಲೀಸರು ಅವರನ್ನು ತಡೆದರು. ಗದ್ದಲ ಸೃಷ್ಟಿಸಿದ ಕೆಲವರನ್ನು ವಶಕ್ಕೆ ಪಡೆಯಲಾಯಿತು. ಬಳಿಕ ರೈತ ಮೋರ್ಚಾ ವತಿಯಿಂದ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.



