ಬೆಂಗಳೂರು: ಕರ್ನಾಟಕದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಸಂತೇಬೆನ್ನೂರು ಲೋಕೇಶ್ ಅಕ್ಷಯ್ (ಎಸ್ಎಲ್ ಅಕ್ಷಯ್) ಅವರು ಭಾನುವಾರ 39ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಬೆಂಗಳೂರಿನಲ್ಲಿ ಡಿವಿಷನ್-3 ಪಂದ್ಯವೊಂದನ್ನು ಆಡುತ್ತಿದ್ದ ವೇಳೆ ಅಸ್ವಸ್ಥಗೊಂಡ ಅವರು ಕುಸಿದು ಬಿದ್ದಿದ್ದು, ಬಳಿಕ ಮೃತಪಟ್ಟಿದ್ದಾರೆ.
ಅಕ್ಷಯ್ 2014-15ರ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಭಾಗವಾಗಿದ್ದರು. 2019ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಿಜಾಪುರ ಬುಲ್ಸ್ ಪರ ಆಡಿದ ಪಂದ್ಯವೇ ಅವರ ಕೊನೆಯ ವೃತ್ತಿಪರ ಪಂದ್ಯವಾಗಿತ್ತು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕರ್ನಾಟಕ ಪರ ಆರು ಪ್ರಥಮ ದರ್ಜೆ, ಮೂರು ಏಕದಿನ ಹಾಗೂ ಒಂಬತ್ತು ಟಿ20 ಪಂದ್ಯಗಳನ್ನು ಆಡಿದ ಅವರು, ಒಟ್ಟು 32 ವಿಕೆಟ್‌ಗಳನ್ನು ಪಡೆದಿದ್ದರು. ಶಿವಮೊಗ್ಗ ಮೂಲದ ಅಕ್ಷಯ್ ಅವರ ನಿಧನಕ್ಕೆ ಕ್ರಿಕೆಟ್ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.



